ಲಕ್ನೋ: ರೈಲು ಬರೋ ಸಮಯದಲ್ಲೇ ಹಳಿ ದಾಟಲು ಸವಾರ ದುಸ್ಸಾಹಸ ತೋರಿದ ಘಟನೆ ಉತ್ತರ ಪ್ರದೇಶದ ಇಟಾವಾದಲ್ಲಿ ನಡೆದಿದ್ದು, ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದು, ರೈಲಿನ ಅಡಿ ಸಿಲುಕಿದ ಬೈಕ್ ಪೀಸ್ ಪೀಸ್ ಆಗಿದೆ. ಈ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಾಸ್ತವವಾಗಿ ಆಗಸ್ಟ್ 26ರಂದು ಜಾರ್ಖಂಡ್ ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್ ಹಟಿಯಾದಿಂದ ಬಿಹಾರಕ್ಕೆ ಹೋಗುತ್ತಿತ್ತು. ಆಗ ರೈಲ್ವೆ ಗೇಟ್ ಬಳಿ ಈ ಅವಘಡ ಸಂಭವಿಸಿದೆ. ಬೈಕ್ ಸವಾರ ಪ್ರಾಣ ಉಳಿಸಿಕೊಳ್ಳಲು ಟ್ರ್ಯಾಕ್ ಮೇಲೆ ಬೈಕ್ ಬಿಟ್ಟು ಬಂದಿದ್ದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ರೈಲು ಗಂಟೆಗೆ 110 ಕಿ.ಮೀ ವೇಗದಲ್ಲಿ ಬರುತ್ತಿತ್ತು. ಆ ವ್ಯಕ್ತಿ ಬೈಕ್ ಬಿಟ್ಟು ಅಲ್ಲಿಂದ ಹೊರಗೆ ಬರದೇ ಇದ್ದಿದ್ದರೆ ಆತನಿಗೂ ರೈಲು ಡಿಕ್ಕಿ ಹೊಡೆಯುತ್ತಿತ್ತು.
ಇದಲ್ಲದೇ ಆ ಸಮಯದಲ್ಲಿ ಇನ್ನೂ ಹಲವರು ರೈಲ್ವೆ ಗೇಟ್ ದಾಟುತ್ತಿದ್ದರು. ರೈಲು ಬರುತ್ತಿರುವುದನ್ನು ಕಂಡು ಜನರೆಲ್ಲ ಅಲ್ಲಿಂದ ಹಿಂದೆ ಸರಿದರು. ಜನರು ಸಾಮಾನ್ಯವಾಗಿ ರೈಲ್ವೆ ಕ್ರಾಸಿಂಗ್‌ಗಳಲ್ಲಿ ಇಂತಹ ಅಪಾಯಗಳನ್ನು ತೆಗೆದುಕೊಳ್ಳುತ್ತಾರೆ. ಇದರಿಂದಾಗಿ ಅಪಘಾತಗಳ ಅಪಾಯವು ಉಳಿದಿದೆ ಎಂದು ಸ್ಥಳೀಯರು ದೂರಿದ್ದಾರೆ.
PublicNext
30/08/2022 10:17 pm