ಅಥಣಿ: ವಿದ್ಯುತ್ ಲೈನ್ ರಿಪೇರಿ ಮಾಡುವಾಗ ವಿದ್ಯುತ್ ತಗುಲಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿನಾಳ ಗ್ರಾಮದಲ್ಲಿ ನಡೆದಿದೆ. ಇನ್ನು ವ್ಯಕ್ತಿ ಸಾವನ್ನಪ್ಪಿ 6 ಗಂಟೆಗಳಾದರೂ ವಿದ್ಯುತ್ ಕಂಬದಲ್ಲೇ ನೇತಾಡುತ್ತಿತ್ತು.
ತಂಗಡಿ ಗ್ರಾಮದ ನಿವಾಸಿ ಆನಂದ ಪಾಟೀಲ (48) ಮೃತ ದುರ್ದೈವಿ. ಹೆಸ್ಕಾಂ ಲೈನ್‌ಮ್ಯಾನ್ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಆನಂದ ಪಾಟೀಲ್ ಬೆಳಿಗ್ಗೆ ವಿದ್ಯುತ್ ಸಮಸ್ಯೆ ಉಂಟಾದ ಹಿನ್ನಲೆಯಲ್ಲಿ ಲೈನ್‌ಮ್ಯಾನ್ ಬದಲು ಕಂಬ ಏರಿದ್ದ, ಎಲ್‌ಸಿ (ಲೈನ್ ಕ್ಲೀಯರ್) ಪಡೆದು ವಿದ್ಯುತ್ ಕಂಬ ಏರಿದಾಗ ಅವಘಡ ಸಂಭವಿಸಿದೆ.
ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಆರೋಪಿಸುತ್ತಿರುವ ಗ್ರಾಮಸ್ಥರು ಶವ ತೆಗೆಯದಂತೆ ಪ್ರತಿಭಟನೆ ಮಾಡುತ್ತಿದ್ದಾರೆ. ಆನಂದ ಕುಟುಂಬಕ್ಕೆ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
PublicNext
28/08/2022 08:19 pm