ಪಬ್ಲಿಕ್ ನೆಕ್ಸ್ಟ್ ವರದಿ : ಸಂತೋಷ ಬಡಕಂಬಿ
ಅಥಣಿ: ಎಂದಿನಂತೆ ನಿನ್ನೆ (ಶನಿವಾರ) ಬೆಳಗ್ಗೆ ಬಣಜವಾಡದತ್ತ ಹೊರಟ ಬಸ್‌ನಲ್ಲಿ ವಿದ್ಯಾರ್ಥಿನಿಯರು ಹರಟೆಯಲ್ಲಿ ತೊಡಗಿದ್ದರು. ಇನ್ನು ಕೆಲವರು ಹಾಸ್ಯ ಮಾಡುತ್ತಾ ನಗುವಿನಲ್ಲಿ ಮುಳುಗಿದ್ದರು. ನೋಡ ನೋಡುತ್ತಿದ್ದಂತೆ ಬಂದು ಅಪ್ಪಳಿಸಿತು ಒಂದು ಲಾರಿ. ಕೆಲವೇ ಕ್ಷಣಗಳ ಹಿಂದೆ ನಗುವಲ್ಲಿ ತೇಲಾಡುತ್ತಿದ್ದ ವಿದ್ಯಾರ್ಥಿನಿಯರ ಚೀರಾಟ, ಗಾಯಗೊಂಡವರ ಆರ್ತನಾದ ಮುಗಿಲು ಮುಟ್ಟಿತ್ತು.
ಶನಿವಾರ ಬೆಳಗ್ಗೆ ಸಂಭವಿಸಿದ ಕಾಲೇಜು ಬಸ್ ಹಾಗೂ ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿಯಲ್ಲಿ ಎರಡೂ ವಾಹನ ಚಾಲಕರನ್ನು ಬಲಿ ತೆಗೆದುಕೊಂಡ ಅಪಘಾತದ ನೋಟವಿದು. ಸುಮಾರು 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಗಂಭೀರ ಗಾಯಗೊಂಡಿದ್ದರೆ, ಇತರ 30 ವಿದ್ಯಾರ್ಥಿನಿಯರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ.
ಗಂಭೀರವಾಗಿ ಗಾಯಗೊಂಡ ಓರ್ವ ಶಿಕ್ಷಕರನ್ನು ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನ ಚಾಲಕರಾದ ರಘುನಾಥ ಅವತಾಡೆ (45) ಮತ್ತು ಮಲೀಕ್‌ಸಾಬ್ ಮುಜಾವರ್ (23) ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ಬೆಳಗಾವಿ ಎಸ್‌ಪಿ ಡಾ. ಸಂಜೀವ ಪಾಟೀಲ್ ಹೇಳಿದ್ದಾರೆ.
ಅಪಘಾತ ಸಂಭವಿಸಿದ ಸ್ಥಳಕ್ಕೆ ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳ ಆರೋಗ್ಯವನ್ನು ಬೆಳಗಾವಿ ಎಸ್‌ಪಿ ಡಾ ಸಂಜೀವ ಪಾಟೀಲ್ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು ಅಥಣಿಯಿಂದ ಕಾಲೇಜು ಕಡೆ ಬರುತ್ತಿರುವ ಬಸ್ ಹಾಗೂ ಕಾಗವಾಡ ಕಡೆಯಿಂದ ಅಥಣಿ ಕಡೆ ಬರುತ್ತಿರುವ ಗೂಡ್ಸ್ ವಾಹನಕ್ಕೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎಂದರು.
ಇನ್ನು ಅಥಣಿ ಭಾಗದಲ್ಲಿ ನಿಯಮ ಮೀರಿ ವಿದ್ಯಾರ್ಥಿಗಳನ್ನು ತುಂಬಿಕೊಂಡು ವಾಹನಗಳನ್ನು ಓಡಿಸಲಾಗುತ್ತಿದೆ.ಅಪಘಾತಗೊಂಡ ಬಣಜವಾಡ ಶಿಕ್ಷಣ ಸಂಸ್ಥೆಗೆ ಸೇರಿದ ಬಸ್‌ನಲ್ಲಿ ಸಹ 75 ವಿದ್ಯಾರ್ಥಿನಿಯರನ್ನು ತುಂಬಲಾಗಿತ್ತು ಎಂದು ಹೇಳಲಾಗಿದೆ. ಸಾರಿಗೆ ನಿಯಮ ಉಲ್ಲಂಘನೆ ಗಮನಕ್ಕೆ ಬಂದರೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ. ಸಾರಿಗೆ ನಿಯಮಗಳು ಪಾಲಿಸಿಕೊಂಡು ಶಾಲೆ ಮಕ್ಕಳನ್ನು ಸುರಕ್ಷಿತವಾಗಿ ಕರೆತಂದು ಮರಳಿ ಮನೆಗೆ ಬಿಡಲಿ ಎಂಬುದು ಪೋಷಕರ ಆಗ್ರಹವಾಗಿದೆ.
PublicNext
21/08/2022 10:57 am