ದಾಂಡೇಲಿ : ಜೋಯಿಡಾ - ದಾಂಡೇಲಿ ರಸ್ತೆಯ ಜನತಾ ಕಾಲೋನಿಯ ಹತ್ತಿರ ಯುವಕನೋರ್ವ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ನಗರದ ಹಳೆ ದಾಂಡೇಲಿಯ ಜೋಸೆಫ್ ಅಮೃತ್ (ವ:22) ಎಂಬಾತನೇ ಮೃತಪಟ್ಟ ಯುವಕನಾಗಿದ್ದಾನೆ. ದ್ವಿಚಕ್ರ ವಾಹನದಿಂದ ಹಾರಿದ ರಭಸಕ್ಕೆ ಗಂಭೀರ ಗಾಯಗೊಂಡ ಈತನನ್ನು ಘಟನಾ ಸ್ಥಳದಿಂದ ಆಸ್ಪತ್ರೆಗೆ ತರುವ ಮುನ್ನವೇ ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ದಾಂಡೇಲಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಗ್ರಾಮೀಣ ಪೊಲೀಸರು ಗಾಯಾಗೊಂಡ ಯುವಕನ ಜೊತೆಯಲ್ಲಿ ಇದ್ದ ಇಬ್ಬರು ಸ್ನೇಹಿತರ ಜೊತೆ ಘಟನಾ ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಸಾರ್ವಜನಿಕ ಆಸ್ಪತ್ರೆಗೆ ನಗರಸಭೆ ಉಪಾಧ್ಯಕ್ಷೆ ಶಿಲ್ಪಾ ಕೋಡೆ ಭೇಟಿ ನೀಡಿದ್ದರು. ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಮೃತನ ಕುಟುಂಬಸ್ಥರ ಹಾಗೂ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು.
ಘಟನೆ ಹೇಗಾಯಿತು?: ಜನತಾ ಕಾಲೋನಿ ಗ್ರಾಮದ ಹತ್ತಿರ ತನ್ನ ಮೋಟಾರ್ ಸೈಕಲ್ ವಾಹನವನ್ನು ಅತಿವೇಗವಾಗಿ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸವಾರ ಯಾವುದೋ ಒಂದು ವಾಹನವನ್ನು ಓವರ್ ಟೇಕ್ ಮಾಡಲು ಹೋಗಿದ್ದಾನೆ. ತನ್ನ ಬದಿಯಿಂದ ರಸ್ತೆಯ ಬಲಬದಿಯ ಕಚ್ಚಾ ರಸ್ತೆಯ ಮೇಲೆ ಚಲಾಯಿಸಿಕೊಂಡು ಹೋಗಿ ಒಮ್ಮೆಲೆ ಬ್ರೇಕ್ ಹಾಕಿದ್ದಾನೆ. ಆಗ ಹಿಂಬದಿ ಸವಾರ ಜೋಸೆಫ್ ಅಮೃತರಾಜ್ ಕಚ್ಚಾರಸ್ತೆಯಲ್ಲಿರುವ ಒಂದು ಕಬ್ಬಿಣದ ರಾಡ್ ಮೇಲೆ ಬಿದ್ದು ಎದೆಯ ಭಾಗಕ್ಕೆ ತೀವ್ರ ಸ್ವರೂಪದ ರಕ್ತಗಾಯವಾಗಿ ಮೃತಪಟ್ಟಿದ್ದಾನೆ. ಅತಿ ವೇಗದ ಚಾಲನೆ ಅಪಘಾತಕ್ಕೆ ಕಾರಣವೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
PublicNext
03/02/2025 12:13 pm