ಬಂಗಾರಪೇಟೆ - ಕಾಮಸಮುದ್ರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ 12 ಮನೆಗಳ ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆನ್ನಲಾದ ಮೂವರು ಅಂತರರಾಜ್ಯ (ಮಂಕಿಕ್ಯಾಪ್ ಗ್ಯಾಂಗ್) ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ 7.61 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಮಸಮುದ್ರ ಪೋಲಿಸ್ ಠಾಣೆ ವ್ಯಾಪ್ತಿಯ ನಡಂಪಲ್ಲಿ, ತನಿಮಡಗು, ಬೋಡೆನಹಳ್ಳಿ, ಕೇತಗಾನಹಳ್ಳಿ ಗ್ರಾಮಗಳಲ್ಲಿ ನಡೆದಿದ್ದ ಮನೆಗಳ್ಳತನದ ಬಗ್ಗೆ ಪ್ರಕರಣಗಳು ದಾಖಲಾಗಿದ್ದವು. ಡಿವೈಎಸ್ಪಿ ಎಸ್.ಪಾಂಡುರಂಗ ಮಾರ್ಗದರ್ಶನದಲ್ಲಿ ಉರಿಗಾಂ ಸಿಪಿಐ ಮಾರ್ಕೊಂಡಯ್ಯ ಮತ್ತು ಪಿಎಸ್‌ಐ ಕಿರಣ್‌ಕುಮಾರ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಮಂಕಿಕ್ಯಾಪ್ ಧರಿಸಿ ಕಳ್ಳತನ ಮಾಡಿದ್ದ ಹರಿಯಾಣ ರಾಜ್ಯದ ನಿವಾಸಿಗಳಾದ ಖಾದರ್ ಬಾಷ (47), ಆರೀಫ್ (50) ಮತ್ತು ಮುಸ್ತಾಕ್‌ಖಾನ್ (50) ಎಂಬುವವರನ್ನು ಮುಳಬಾಗಿಲು ಸಮೀಪ ಬಂಧಿಸಿದ್ದಾರೆ. ಒಟ್ಟು 12 ಪ್ರಕರಣಗಳನ್ನು ಭೇದಿಸಲಾಗಿದ್ದು, ಈ ಪೈಕಿ 7.61 ಲಕ್ಷ ಮೌಲ್ಯದ 67ಗ್ರಾಂ ಚಿನ್ನದ ಆಭರಣಗಳು, 250 ಗ್ರಾಂ ಬೆಳ್ಳಿ ಆಭರಣಗಳು, 1 ಪಲ್ಸರ್ ದ್ವಿಚಕ್ರ ವಾಹನ ಮತ್ತು 1 ಫ್ಯಾಶನ್ ಪ್ಲಸ್ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Kshetra Samachara
02/02/2025 05:02 pm