ಕಾಪು: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಟ್ಟು ಎಂಬ ಊರು ಮಟ್ಟು ಗುಳ್ಳ ಬೆಳೆಗೆ ಪ್ರಸಿದ್ಧ. ಇಂತಹ ಮಟ್ಟು ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಹಳದಿ ಕಲ್ಲಂಗಡಿ ಬೆಳೆದು ಅದರಲ್ಲೂ ಸೈ ಎನಿಸಿಕೊಂಡಿರುವ ಯುವಕ ಬಂಪರ್ ಫಸಲು ತೆಗೆದಿದ್ದಾರೆ.
ಕಾಪುವಿನ ಮಟ್ಟು ಜಿಯೊಗ್ರಾಪಿಕಲ್ ಮಾನ್ಯತೆ ಪಡೆದ ಮಟ್ಟು ಗುಳ್ಳ ಕೃಷಿ ಮಾಡುವ ಪ್ರದೇಶ. ಆದರೆ ಈ ಬಾರಿ ಅತಿಯಾದ ಮಳೆ,ಉಪ್ಪು ನೀರಿನಿಂದಾಗಿ ಮಟ್ಟು ಗುಳ್ಳ ಕೃಷಿಯಲ್ಲಿ ಕೈ ಸುಟ್ಟುಕೊಂಡ ಯುವಕನೊಬ್ಬ ಸಣ್ಣ ಜಾಗದಲ್ಲಿ ಕಲ್ಲಂಗಡಿ ಕೃಷಿಯನ್ನು ನಾಟಿ ಮಾಡಿ ಗೆದ್ದಿದ್ದಾರೆ.ಆರೋಹಿ ಎಫ್ 1 ಹೈಬ್ರಿಡ್ ತಳಿಯನ್ನು ಈ ಯುವಕ 100 ಗ್ರಾಂ ಗೆ 12.500 ರೂ ನೀಡಿ ಅನ್ ಲೈನ್ ನಲ್ಲಿ ಬೀಜ ಖರೀದಿ ಮಾಡಿದ್ದರು. ಬಳಿಕ ಭರ್ಜರಿ ಫಸಲು ತೆಗೆದು ಮೊದಲ ಪ್ರಯೋಗದಲ್ಲೇ ಯಶಸ್ಸು ಕಂಡಿದ್ದಾರೆ.
ಇವರು ಸ್ವಂತ ಜಮೀನು ಇಲ್ಲದೆ ಇದ್ದರೂ ,ಕುಟುಂಬ ಮತ್ತು ಸ್ನೇಹಿತರ ಹಡಿಲು ಗದ್ದೆಯನ್ನು ಪಡೆದು ಕೃಷಿ ಮಾಡುತ್ತಾರೆ. ಮೂರು ಎಕರೆಯಲ್ಲಿ ಭತ್ತ ಬೇಸಾಯ ಮಾಡಿದ್ರೆ 37 ಸೆಂಟ್ಸ್ ನಲ್ಲಿ ಈ ವರ್ಷ ಹಳದಿ ಕಲ್ಲಂಗಡಿ ಬೆಳೆಯನ್ನು ಬೆಳೆಸಿದ್ದಾರೆ.ಹಳದಿ ಕಲ್ಲಂಗಡಿ ಜೊತೆಗೆ ಸುಮೊ ತಳಿಯ ಕಲ್ಲಂಗಡಿ ಯನ್ನೂ ಬೆಳೆಸಿದ್ದಾರೆ. ಕಾಡುಪ್ರಾಣಿ ,ನವಿಲು ಕಾಟ ಜೊತೆಗೆ ಅಕಾಲಿಕ ಮಳೆಯ ನಡುವೆಯೂ ಹಳದಿ ಕಲ್ಲಂಗಡಿ ಕೃಷಿ ಯುವ ಕೃಷಿಕನ ಕೈಹಿಡಿದಿದೆ. 75 ದಿನಗಳಲ್ಲಿ 25 ಸಾವಿರದಷ್ಟು ಖರ್ಚು ಮಾಡಿ 2 ಟನ್ ಗೂ ಅಧಿಕ ಕಲ್ಲಂಗಡಿ ಬೆಳೆಯ ಫಸಲು ಪಡೆದಿದ್ದಾರೆ.ಮಾಮೂಲಿ ಕಲ್ಲಂಗಡಿಗಿಂತ ಹಳದಿ ಕಲ್ಲಂಗಡಿ ಸಿಹಿ ಹೆಚ್ಚಾಗಿದ್ದು ಉತ್ತಮ ಮಾರುಕಟ್ಟೆಯೂ ಇದೆ.ಹಾಗಾಗಿ ಈ ಯುವಕನ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿದ್ದೂ ಅಲ್ಲದೆ ಮತ್ತಷ್ಟು ಹುರುಪನ್ನೂ ನೀಡಿದೆ.
PublicNext
01/02/2025 07:18 pm