ಬೆಳಗಾವಿ: ಕುಂಭಮೇಳದಲ್ಲಿ ನಡೆದ ಕಾಲ್ತುಳಿತದಲ್ಲಿ ಬೆಳಗಾವಿಯ ನಾಲ್ವರು ಸಾವನ್ನಪ್ಪಿದ್ದು, ಮೃತ ಮಹಾದೇವಿ ಬಾವನೂರ ಮನೆಯಲ್ಲಿ ನೀರವ ಮೌನ ಆವರಿಸಿದೆ.
ಬೆಳಗಾವಿಯ ಶಿವಾಜಿ ನಗರದಲ್ಲಿ ಇರುವ ಮಹಾದೇವಿ ಬಾವನೂರ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಪತಿ ಹನಮಂತು, ಇಬ್ಬರು ಮಕ್ಕಳು ಕಣ್ಣೀರಿಡುತ್ತಿದ್ದಾರೆ. ಮನೆಗೆ ಆಗಮಿಸಿರುವ ಸ್ನೇಹಿತರು ಸಂಬಂಧಿಕರು ಬಾವನೂರ ಕುಟುಂಬಸ್ಥರನ್ನು ಸಮಾಧಾನ ಪಡಿಸುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಕುಟುಂಬಕ್ಕೆ ನೀಡಿರುವ ಮಾಹಿತಿ ಪ್ರಕಾರ ಮಹಾದೇವಿ ಬಾವನೂರ ಅವರ ಮೃತದೇಹ ಇಂದು ದೆಹಲಿಗೆ ಆಗಮಿಸಲಿದೆ. ಬಳಿಕ ಅಲ್ಲಿಂದ ವಿಮಾನದ ಮೂಲಕ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬರಲಿದೆ. ಮೂಲತಃ ಗದಗ ಜಿಲ್ಲೆಯವರಾದ ಬಾವನೂರ ಕುಟುಂಬ ಹಲವಾರು ವರ್ಷಗಳಿಂದ ಬೆಳಗಾವಿಯಲ್ಲಿ ನೆಲೆಸಿದ್ದಾರೆ. ಮಹಾದೇವಿ ಅವರ ತವರೂರಾದ ಹುಬ್ಬಳಿ ಬಳಿಯ ನುಲ್ವಿ ಗ್ರಾಮದಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ.
PublicNext
30/01/2025 03:10 pm