ವಿಜಯನಗರ: ವಿಶ್ವವಿಖ್ಯಾತ ಹಂಪಿಯ ವಿಜಯ ವಿಠಲ ದೇಗುಲದ ಗೋಪುರದ ಸ್ಥಿತಿಗತಿ ಅರಿಯಲು ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಡಿಫರೆನ್ಸಿಯಲ್ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಡಿಜಿಪಿಎಸ್) ಹಾಗೂ ಲಿಡಾರ್ ಎಂಬ ವಿನೂತನ ತ್ರಿಡಿ ತಂತ್ರಜ್ಞಾನದ ಮೂಲಕ ಮೊದಲ ಬಾರಿಗೆ ಸಮೀಕ್ಷೆ ನಡೆಸಲಾಗುತ್ತಿದೆ.
ಹಂಪಿಯಲ್ಲಿ ವಿಜಯನಗರ ಅರಸರ ಕಾಲದ ಸ್ಮಾರಕಗಳು, ಐತಿಹಾಸಿಕ ದೇಗುಲದ ಗೋಪುರಗಳಿವೆ. ಅವುಗಳಲ್ಲಿ ಬಹುತೇಕ ಹಾನಿಗೊಳಗಾಗಿವೆ. ಇವುಗಳ ಸಂಶೋಧನೆ, ಸಂರಕ್ಷಣೆ ಮಾಡಲು ಸಮೀಕ್ಷೆ ನಡೆಸುವುದು ಅಗತ್ಯವಾಗಿದೆ. ಆದರೆ ಕೆಲ ಗೋಪುರ ಹಾಗೂ ಸ್ಮಾರಕಗಳ ಮೇಲೆ ಹತ್ತಿ ಇಳಿಯುವುದರಿಂದ ಹಾನಿಯಾಗುವ ಸಾಧ್ಯತೆಯಿವೆ. ಆದ್ದರಿಂದ ಇದೇ ವಿಜಯವಿಠಲ ದೇಗುಲದ ಗೋಪುರದ ಬಿರುಕು ಸೇರಿದಂತೆ ಸ್ಥಿತಿಗತಿಯನ್ನು ಅರಿಯಲು ಡಿಜಿಪಿಎಸ್ ಹಾಗೂ ಲಿಡರ್ ಮೂಲಕ ಸರ್ವೇ ಮಾಡಲು ಬೆಂಗಳೂರಿನಿಂದ ತಜ್ಞರ ತಂಡ ಮುಂದಾಗಿದೆ.
ಗೋಪುರದಲ್ಲಿ ಕೂಡ ಹಿಂದೆ ಬಿರುಕುಗಳಿವೆ. ಜಿ.20 ಸಭೆ ವೇಳೆ ಅವುಗಳಿಗೆ ಗಾಜಿನ ಪಟ್ಟಿಗಳನ್ನು ಅಳವಡಿಕೆ ಮಾಡಲಾಗಿತ್ತು. ಅಂದಿನಿಂದ ಯಾವುದೇ ಬಿರುಕು ಕಂಡಿಲ್ಲ. ಇನ್ನೂ ಹೆಚ್ಚಿನ ಅಧ್ಯಯನ ನಡೆಸಲು ಇಲಾಖೆ ತಂತ್ರಜ್ಞಾನದ ಮೊರೆ ಹೋಗಿದ್ದು ಡಿಜಿಪಿಎಸ್‌ನಿಂದ ಜಿಪಿಎಸ್‌ನಲ್ಲಿ ಸ್ಥಳದ ನಿಖರ ಮಾಹಿತಿ ಸಿಗಲಿದೆ. ಇನ್ನೂ ಲಿಡರ್ ಲೇಜರ್‌ನಿಂದ ಗೋಪುರದ ಇಂಚಿಂಚು ಡೆಟಾ ಸಂಗ್ರಹ ಮಾಡಲಿದೆ. ದೇಗುಲದ ಪೂರ್ವಭಾಗದ ಗೋಪುರದಿಂದ ಪ್ರವಾಸಿಗರಿಗೆ ಇಂದು ನಿರ್ಬಂಧ ಹೇರಲಾಗಿದೆ. ಪುರಾತತ್ವ ಇಲಾಖೆಯ ಅಧೀಕ್ಷಕ ನಿಹಿಲ್ ದಾಸ್ ಮಾಹಿತಿ ನೀಡಿದ್ರು.
PublicNext
29/01/2025 11:50 am