ಶಿವಮೊಗ್ಗ : ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಇತ್ತೀಚಿನ ವರ್ಷದಲ್ಲಿ ಒಂದಲ್ಲಾ ಒಂದು ವಿಷಯದಲ್ಲಿ ಚರ್ಚೆಗೆ ಬರುತ್ತಲೇ ಇರುತ್ತೇ. ಈಗ ಮತ್ತೇ ವಿಐಎಸ್ಎಲ್ ವಿಚಾರವಾಗಿ ಶಿವಮೊಗ್ಗ ಜಿಲ್ಲೆಯ ಇಬ್ಬರು ನಾಯಕರ ನಡುವೆ ರಾಜಕೀಯ ಟಾಕ್ ವಾರ್ ಶುರುವಾಗಿದೆ.
ದೇಶದ ಇತಿಹಾಸ ಪ್ರಸಿದ್ಧ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ದಶಕಗಳಿಂದ ಗ್ರಹಣ ಹಿಡಿದಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಗ್ಗಜಗ್ಗಾಟದಲ್ಲಿ ದೇಶದ ಪ್ರತಿಷ್ಠಿತ ಕಾರ್ಖಾನೆಯು ಬಾಗಿಲು ಮುಚ್ಚುವ ಹಂತಕ್ಕೆ ಬಂದು ತಲುಪಿದೆ.
ಸದ್ಯ ಆಕ್ಸಿಜನ್ ನಲ್ಲಿರುವ ಭದ್ರಾವತಿಯ ವಿಐಎಸ್ ಎಲ್ ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ ನೀಡಿ ಹೋದ ನಂತರದಲ್ಲಿ ಕಾರ್ಮಿಕರಲ್ಲಿ ಹೊಸ ಆಶಾಕಿರಣ ಸಿಕ್ಕಂತಾಗಿತ್ತು. ಆದರೆ, ಇಲ್ಲಿಯ ವರೆಗೆ ಕಾರ್ಖಾನೆಗೆ ಹಣ ತೊಡಗಿಸುವ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಯಾವುದೇ ಘೋಷಣೆ ಮಾಡಿಲ್ಲ. ಹಾಗಾಗಿ ಈಗ ಜಿಲ್ಲೆಯ ಇಬ್ಬರು ರಾಜಕೀಯ ನಾಯಕರ ನಡುವೆ ಪೊಲಿಟಿಕಲ್ ಟಾಕ್ ವಾರ್ ಶುರುವಾಗಿದೆ.
ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿದಂತೆ ವಿಐಎಸ್ ಎಲ್ ಉಳಿಸುತ್ತೇವೆ ಎಂದು ಭರವಸೆ ನೀಡಿದ್ದ ಭರವಸೆ ಎಲ್ಲಿಗೆ ಹೋಗಿದೆ? ರಾಜ್ಯದವರೇ ಆದ ಕುಮಾರಸ್ವಾಮಿಯವರ ಇಲಾಖೆಯಿಂದ ಆಂಧ್ರದ ವೈಜಾಕ್ ಕಾರ್ಖಾನೆಗೆ ಅನುದಾನ ನೀಡುವ ಘೋಷಣೆ ಆಗುತ್ತೆ. ನಮ್ಮ ರಾಜ್ಯದ ಹೆಮ್ಮೆಯ ಕಾರ್ಖಾನೆಗೆ ಯಾಕೇ ಆಸಕ್ತಿ ತೋರುತ್ತಿಲ್ಲ! ವಿಐಎಸ್ಎಲ್ ಮುಚ್ಚುವ ಹಂತಕ್ಕೆ ಬಂದಿದೆ.ಇದಕ್ಕೆ ಬಿಜೆಪಿಯವರು ಸುಳ್ಳು ಹೇಳುತ್ತಾ ಬಂದಿರೋದೆ ಕಾರಣ ಅಂತ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಆರೋಪ ಮಾಡಿದ್ದಾರೆ.
ಇನ್ನೂ ದೇಶದ ಪ್ರಸಿದ್ದ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಸಿ ಎಂದು ಹೋರಾಟ ಆರಂಭವಾಗಿ ವರ್ಷಗಳೇ ಕಳೆದಿದೆ.ಆದರೂ ಇದರ ಪ್ರಯೋಜನ ಮಾತ್ರ ಆಗಿಲ್ಲ, ಹಾಗಾಗಿ ಕುಮಾರಸ್ವಾಮಿ ಕೇಂದ್ರ ಸಚಿವರಾಗುತ್ತಿದಂತೆ ಸಂಸದ ರಾಘವೇಂದ್ರ ವಿಐಎಸ್ಎಲ್ ಕಾರ್ಮಿಕರ ನಿಯೋಗ ದೆಹಲಿಗೆ ಕರೆದುಕೊಂಡು ಹೋಗಿ ಮಾತುಕತೆ ನಡೆಸಿ ಕುಮಾರಸ್ವಾಮಿಯವರನ್ನು ಭದ್ರಾವತಿಗೆ ಕರೆಸಿ ವಾಸ್ತವ ಸ್ಥಿತಿಯನ್ನು ತಿಳಿಸಿ ಅನುದಾನ ಬಿಡುಗಡೆ ಮಾಡಿ ವಿಐಎಸ್ಎಲ್ ಪುನಾರಂಭ ಮಾಡಿ ಪುನಶ್ಚೇತನಗೊಳಿಸಲು ಮನವಿ ಮಾಡಿದ್ದರು.
ಈಗ ಮತ್ತೆ ಕಾರ್ಖಾನೆ ಉಳಿಸುವ ವಿಚಾರ ಮುನ್ನಲೆಗೆ ಬಂದಿದ್ದು ಶಿಕ್ಷಣ ಸಚಿವರ ಆರೋಪಕ್ಕೆ ಸಂಸದ ರಾಘವೇಂದ್ರ ಖಾರವಾಗೇ ಟಕ್ಕರ್ ನೀಡಿದ್ದಾರೆ. ಸುಳ್ಳು ಹೇಳಿ ರಾಜಕಾರಣ ಮಾಡುವ ಪರಿಸ್ಥಿತಿ ನಮಗಿಲ್ಲ. ಕಾರ್ಖಾನೆ ವಿಚಾರದಲ್ಲಿಒಳ್ಳೆಯ ಸುದ್ದಿ ಕೊಡುವ ಕೆಲಸ ಶೀಘ್ರದಲ್ಲೇ ಮಾಡುತ್ತೇವೆ ಎಂದು ಪ್ರತ್ಯುತ್ತರ ನೀಡಿದ್ದಾರೆ.
ಒಟ್ಟಾರೆ ವಿಐಎಸ್ಎಲ್ ಕಾರ್ಖಾನೆ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಮನ್ವಯತೆಯಿಂದ ರಾಜ್ಯದ ಹೆಮ್ಮೆಯ ಕಾರ್ಖಾನೆಯನ್ನು ಉಳಿಸುವ ನಿಟ್ಟಿನಲ್ಲಿ ಮುಂದಾಗಲಿ ಎನ್ನುವುದೇ ನಮ್ಮ ಆಗ್ರಹ.
ವೀರೇಶ್ ಜಿ.ಹೊಸೂರ್, ಪಬ್ಲಿಕ್ ನೆಕ್ಸ್ಟ್ ಶಿವಮೊಗ್ಗ
PublicNext
24/01/2025 10:25 pm