ಬ್ರಹ್ಮಾವರ : ಕಚ್ಚೂರು ಶ್ರೀ ಮಾಲ್ತಿದೇವಿ ಶ್ರೀ ಬಬ್ಬುಸ್ವಾಮಿ ಮೂಲಕ್ಷೇತ್ರದಲ್ಲಿ 5 ದಿನಗಳ ಕಾಲ ನಾನಾ ಧಾರ್ಮಿಕ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮದೊಂದಿಗೆ ಜರುಗಿದ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ವಿದ್ಯಾ ವಾಚಸ್ಪತಿ ಡಾ.ವಿಶ್ವ ಸಂತೋಷ ಭಾರತೀ ಶ್ರೀಪಾದರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಿತು.
ಅವರು ಈ ಸಂದರ್ಭ ಮಾತನಾಡಿ, ಬಾರಕೂರು ಕಚ್ಚೂರು ದೇವಸ್ಥಾನ ದೇಶಕ್ಕೆ ಮಾದರಿಯಾಗಿದೆ. ತಳ ಸಮುದಾಯ ಒಂದು ತಮ್ಮದೇ ಆಡಳಿತ ಮತ್ತು ಅರ್ಚಕತ್ವದಲ್ಲಿ ಧಾರ್ಮಿಕತೆಯನ್ನು ಒಂದುಗೂಡಿಸಿ ಸಮಸ್ತ ಹಿಂದೂ ಸಮುದಾಯಕ್ಕೆ ಅಡಿಪಾಯವಾಗಿದೆ. ತಳ ಸಮುದಾಯ ಬಲಿಷ್ಠವಾದಷ್ಟು ಹಿಂದುತ್ವಕ್ಕೆ ಶಕ್ತಿ ಹೆಚ್ಚುತ್ತದೆ ಎಂದರು.
ಧರ್ಮದರ್ಶಿ ಗೋಕುಲ್‌ದಾಸ್ ಬಾರ್ಕೂರು ಮಾತನಾಡಿ, ಕಚ್ಚೂರು ಮಾಲ್ತೀ ದೇವಿ ದೇವಸ್ಥಾನ ಒಂದು ಸಮುದಾಯದ ಮೂಲಕ್ಷೇತ್ರ ಮತ್ತು ಕುಲದೇವರಾದರೂ ಭಾರತದ ಬಹು ಸಂಸ್ಕೃತಿಯನ್ನು ಇಲ್ಲಿ ಸಾಕಾರಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು, ಸಮಾಜ ಸೇವಕರನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಕ್ಷೇತ್ರದ ಅಧ್ಯಕ್ಷ ಶಿವಪ್ಪ ನಂತೂರು,ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ, ಮಾಜಿ ಶಾಸಕ ಕೆ. ರಘುಪತಿ ಭಟ್, ಪದ್ಮನಾಭ ಕಾಂಚನ್,ಬಾರಕೂರು ಶಾಂತಾರಾಮ ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ, ಪಿ. ಬಾಬು ಮಲ್ಲಾರ್ ಸೂಟರ್‌ಪೇಟೆ ಸೇರಿದಂತೆ ನಾನಾ ಗುರಿಕಾರರು, ಗಣ್ಯರು ಉಪಸ್ಥಿತರಿದ್ದರು.
PublicNext
20/01/2025 07:17 am