ಮಂಗಳೂರು: ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶುಕ್ರವಾರ ನಡೆದ ಬಹುಸಂಸ್ಕೃತಿ ಉತ್ಸವ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಗೈರು ಆಗಿರುವುದರಿಂದ ಸ್ವತಃ ಕಾಂಗ್ರೆಸ್ ಕಾರ್ಯಕರ್ತರು, ಅಕಾಡೆಮಿಯ ಮುಖಂಡರು ಒಳಗೊಳಗೆ ಅಸಮಾಧಾನ ವ್ಯಕ್ತಪಡಿಸಿರುವ ಪ್ರಸಂಗ ನಡೆದಿದೆ.
ಸಿಎಂ ಸಿದ್ದರಾಮಯ್ಯ ಇಂದು ಬೆಳಗ್ಗೆ 11.30ಕ್ಕೆ ಮಂಗಳೂರಿಗೆ ಬರಬೇಕಿತ್ತು. ಆದರೆ, ಅವರು 1.30 ಗಂಟೆ ತಡವಾಗಿ ಬಂದಿದ್ದಾರೆ. ಮೊದಲು ಅವರು ಮೇರಿಹಿಲ್‌ನಲ್ಲಿ ರಾಜೀವ್ ಗಾಂಧಿ ವಿವಿ ಆರೋಗ್ಯ ವಿಜ್ಞಾನಗಳ ಹೊಸ ಪ್ರಾದೇಶಿಕ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಿ ಅಲ್ಲಿಂದ ನೇರವಾಗಿ ಮಧ್ಯಾಹ್ನ 12.15ಕ್ಕೆ ಬಹುಸಂಸ್ಕೃತಿ ಉತ್ಸವ ಕಾರ್ಯಕ್ರಮಕ್ಕೆ ಬರಬೇಕಿತ್ತು. ಆದರೆ, ಶಿಲಾನ್ಯಾಸ ನೆರವೇರಿಸಿದ ಸಿದ್ದರಾಮಯ್ಯ ಅಲ್ಲಿಂದ ಐವನ್ ಡಿಸೋಜ ಮನೆಗೆ ಊಟಕ್ಕೆ ಹೋಗಿದ್ದಾರೆ. ಬಳಿಕ ಸ್ಪೀಕರ್ ಖಾದರ್ ಮನೆಗೆ ಹೋಗಿದ್ದಾರೆ.
ಇತ್ತ ಪುರಭವನದಲ್ಲಿ ನಡೆಯುವ ಬಹುಸಂಸ್ಕೃತಿ ಉತ್ಸವದಲ್ಲಿ ಸಿಎಂ ಬರುವಿಕೆಗಾಗಿ ಆಸನಗಳನ್ನು ಅಣಿಗೊಳಿಸಲಾಗಿತ್ತು. ತಡವಾಗಿ ಬರುವರೆಂಬ ಮಾಹಿತಿಯ ಹಿನ್ನೆಲೆಯಲ್ಲಿ ಆಸನಗಳನ್ನು ತೆಗೆದು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ಬಿಟ್ಟುಕೊಡಲಾಯಿತು. ಆಸನಗಳನ್ನು ಎರಡೆರಡು ಬಾರಿ ತೆಗೆದು, ಎರಡೆರಡು ಬಾರಿ ಅಣಿಗೊಳಿಸಿದರೂ ಸಿಎಂ ಪತ್ತೆ ಇರಲಿಲ್ಲ. ಕೊನೆಗೆ ಇನ್ನಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವಾಗಲೇ ಸಿಎಂ ಬರುವುದಿಲ್ಲ ಎಂಬ ಸುದ್ದಿ ಬಂದಿದೆ. ಇದರಿಂದ ಪ್ರೇಕ್ಷಕರು ಎದ್ದು ಹೊರ ನಡೆಯತೊಡಗಿದ್ದಾರೆ.
ತುಳು, ಕೊಡವ, ಬ್ಯಾರಿ, ಕೊಂಕಣಿ, ಅರೆಭಾಷೆ ಮತ್ತು ಯಕ್ಷಗಾನ ಅಕಾಡೆಮಿಗಳ ಆಯೋಜನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೇ ಸಿಎಂ ಗೈರು ಆಗಿ ಐವನ್, ಖಾದರ್ ಮನೆಗೆ ಹೋಗಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಕಾಡೆಮಿಗಳ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
PublicNext
17/01/2025 09:59 pm