ಮಂಗಳೂರು: ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ 68ರ ವ್ಯಕ್ತಿ ಕೇರಳ ಆಸ್ಪತ್ರೆಯ ಶವಾಗಾರದಲ್ಲಿ ಜೀವಂತವಾಗಿದ್ದಾರೆ ಎಂದು ಸದ್ದು ಮಾಡಿದ ವಿಚಾರಕ್ಕೆ ಇದೀಗ ಟ್ವಿಸ್ಟ್ ದೊರಕಿದೆ. ಈ ಮೂಲಕ ಆತ ಮೃತಪಟ್ಟಿರುವುದೇ ಸುಳ್ಳು ಎಂಬ ವಿಚಾರ ಬೆಳಕಿಗೆ ಬಂದಿದೆ.
ಕೇರಳ ಮೂಲದ ಪವಿತ್ರನ್ ಎಂಬ ವೃದ್ಧರೊಬ್ಬರನ್ನು ಕುಟುಂಬಸ್ಥರು ಜ್ವರ, ಕೆಮ್ಮು ಎಂದು ಜನವರಿ 13ರಂದು ನಸುಕಿನ ವೇಳೆ ನಗರದ ಹೊರವಲಯದ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದರು. ಆದರೆ ಬುಧವಾರ ಕುಟುಂಬಸ್ಥರು ಆತ ಮೃತಪಟ್ಟಿದ್ದಾರೆಂದು ಕರೆದೊಯ್ದಿದ್ದಾರೆ. ಸೋಮವಾರ ರಾತ್ರಿ ಮೃತದೇಹವವನ್ನು ಕಣ್ಣೂರಿನ ಎಕೆಜಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿ ಮಂಗಳವಾರ ಊರಿಗೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನಡೆಸಲು ಕುಟುಂಬ ನಿರ್ಧರಿಸಿತ್ತು. ರಾತ್ರಿ 11:30ರ ವೇಳೆಗೆ ಮೃತದೇಹವನ್ನು ಶವಾಗಾರಕ್ಕೆ ಸ್ಥಳಾಂತರಿಸುತ್ತಿದ್ದಾಗ ಪವಿತ್ರನ್ ಕೈ ಅಲುಗಾಡುವುದನ್ನು ಕರ್ತವ್ಯದಲ್ಲಿದ್ದ ಅಟೆಂಡೆಂಟ್ ಜಯನ್ ಗಮನಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆಯ ವೈದ್ಯಕೀಯ ತಂಡವು ಪರೀಕ್ಷಿಸಿದಾಗ ಪವಿತ್ರನ್ ಜೀವಂತವಾಗಿರುವುದು ತಿಳಿದು ಬಂದಿದೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು.
ಈಬಗ್ಗೆ ಸ್ಪಷ್ಟನೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಅವರು, ಪವಿತ್ರನ್ ಮೃತಪಟ್ಟಿರುವುದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆ ಘೋಷಿಸಿಲ್ಲ. ರೋಗಿಯ ಸಂಬಂಧಿಕರು ವೈದ್ಯರು ಹೇಳಿದ ವೆಂಟಿಲೇಟರ್ ಚಿಕಿತ್ಸೆಯ ಸಲಹೆಗೆ ಒಪ್ಪಲಿಲ್ಲ. ಅಲ್ಲದೇ ಅವರು ಗಂಭೀರ ಸ್ಥಿತಿಯಲ್ಲಿ ಇದ್ದರೂ, ಎಂಆರ್‌ಐ ಸ್ಕ್ಯಾನಿಂಗ್‌ಗೆ ಒಪ್ಪದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ರೋಗಿಯನ್ನು ಕರೆದೊಯ್ದಿದ್ದಾರೆ ಎಂದಿದ್ದಾರೆ.
PublicNext
17/01/2025 08:24 am