ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯಲು ನಾವು ಹೋರಾಡುತ್ತಿರುವುದು ನಿಜ. ಈ ವಿಚಾರದಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ರಮೇಶ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಡಿಯೂರಪ್ಪನವರ ಬಗ್ಗೆ ಅಪಾರ ಗೌರವವಿದೆ. ಅವರು ರಾಜ್ಯಪ್ರವಾಸಕ್ಕೆ ನಮ್ಮ ಸ್ವಾಗತವಿದೆ. ಆದರೆ, ಮಗನ ಸ್ಥಾನ ಭದ್ರಪಡಿಸಲೋ ಅಥವಾ ಪಕ್ಷ ಭದ್ರಪಡಿಸಲೋ ಎಂಬುದನ್ನು ಸ್ಪಷ್ಟಪಡಿಸಬೇಕು. ಪದೇ ಪದೇ ಹೈಕಮಾಂಡ್ ಬ್ಲಾಕ್ ಮಾಡಬೇಡಿ. ನಿಮಗೆ ವಯಸ್ಸಾಗಿದೆ. ಜೀವನದ ಕೊನೆ ಹಂತದಲ್ಲಿ ಇದ್ದೀರಿ. ಪಕ್ಷ ನಿಮಗೆ ಎಲ್ಲವನ್ನೂ ಕೊಟ್ಟಿದೆ. ಪಕ್ಷವನ್ನು ಬ್ಲಾಕ್ ಮಾಡಬೇಡಿ. ವಿಜಯೇಂದ್ರನ ಬೆನ್ನು ಹತ್ತಿದರೆ ನೀವು ಹಾಳಾಗುತ್ತೀರಿ. ದಯವಿಟ್ಟು ಮಗ ಅಂತಾ ನೋಡಬೇಡಿ. ಫೇಲ್ ಆಗಿರುವ ಅಧ್ಯಕ್ಷನ ಬಿಟ್ಟು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟು ಹೊಸ ಅಧ್ಯಕ್ಷರನ್ನು ಮಾಡಲು ನೀವು ಸಹಕಾರ ಕೊಡುವಂತೆ ಕೇಳಿಕೊಂಡರು. ಹೈಕಮಾಂಡ್ ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿದರೂ ಸ್ವಾಗತಿಸುತ್ತೇವೆ ಎಂದರು.
ಸಿ.ಟಿ.ರವಿ ಪ್ರಕರಣದಲ್ಲಿ ಅವರು ಬಳಸಿರುವ ಶಬ್ದಕ್ಕೆ ನನ್ನ ತಕರಾರು ಇದೆ. ಅದಕ್ಕೆ ನನ್ನ ಸಹಮತ ಇಲ್ಲ. ಆದರೆ, ಅವರು ನಾನು ಆ ರೀತಿ ಮಾತಾಡಿಲ್ಲ ಎಂದಿದ್ದರು. ಹಿಂದೆ ಇಂದಿರಾ ಗಾಂಧಿ ಅವರ ಬಗ್ಗೆ ಸಿ.ಎಂ.ಇಬ್ರಾಹಿಂ ಏನು ಬೇಕಾದರೂ ಮಾತಾಡಿದ್ದರು. ರಾಜಕಾರಣದಲ್ಲಿ ಇಂಥ ವಿಚಾರಗಳನ್ನು ದೊಡ್ಡದು ಮಾಡಬಾರದಿತ್ತು. ರಾಜಕಾರಣದಲ್ಲಿ ಯಾರೂ ಶುದ್ಧರಲ್ಲ. ಬಾಯಿ ತಪ್ಪಿ ಆ ರೀತಿ ಮಾತಾಡಿರುತ್ತಾರೆ. ಅದನ್ನು ಅಲ್ಲಿಯೇ ಮುಗಿಸಬೇಕಿತ್ತು. ಆದರೆ, ಅದನ್ನು ದೊಡ್ಡದು ಮಾಡಿ, ವಿಧಾನಸೌಧಕ್ಕೆ ಅಗೌರವ ತಂದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
PublicNext
15/01/2025 11:08 pm