ಚಾಮರಾಜನಗರ : ದೇಶದ ಯುವಕರಿಗೆ ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಕರೆ ನೀಡಿ ಯುವ ಜನರನ್ನು ಎಚ್ಚರಿಸಿದ ಬಹುದೊಡ್ಡ ವ್ಯಕ್ತಿತ್ವದ ಆದರ್ಶ ಪುರುಷ ಸ್ವಾಮಿ ವಿವೇಕಾನಂದರಾಗಿದ್ದಾರೆ ಎಂದು ಪಿಯು ಡಿಡಿ ಮಂಜುನಾಥ ಪ್ರಸನ್ನ ತಿಳಿಸಿದರು.
ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಹಾಗೂ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದರ 162ನೇ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ದೇಶದ ಯುವಜನರಿಗೆ ನೀಡಿರುವ ಕೊಡುಗೆಗಳು ಆದರ್ಶವಾಗಿವೆ. ವಿವೇಕಾನಂದರು ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಕೂಡ ಗೌರವಿಸುತ್ತಿದ್ದರು. ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತನ್ನದೇ ಆದ ಪ್ರತಿಭೆಯನ್ನು ಹೊಂದಿರುತ್ತಾನೆ. ಆ ಪ್ರತಿಭೆಯನ್ನು ಹೊರತೆಗೆಯುವುದೇ ಶಿಕ್ಷಣ ಎಂದು ತಿಳಿಸಿದ್ದರು. ಹಾಗೇಯೇ ಭಾರತದ ಶ್ರೇಷ್ಠ ಪರಂಪರೆಯನ್ನು ಇಡೀ ಜಗತ್ತಿಗೆ ಮನವರಿಕೆ ಮಾಡಿಕೊಟ್ಟ ಮಹಾನ್ ವ್ಯಕ್ತಿ ವಿವೇಕಾನಂದರಾ ಗಿದ್ದಾರೆ ಎಂದರು.
ನೈತಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದ ವಿವೇಕಾನಂ ದರು ಮನುಷ್ಯನ ಬದುಕಿಗೆ ಎಲ್ಲ ರೀತಿಯ ನೀತಿ ನಿಯಮಗಳನ್ನು ರೂಪಿಸುವ ಒಂದು ಚೌಕಟ್ಟು ಧರ್ಮವಾಗಿದೆ ಎಂದು ಸಾರಿದ್ದರು. ಈ ದೇಶದ ಪರಂಪರೆ, ಜನರ ನಾಡಿಮಿಡಿತವನ್ನು ಅರ್ಥ ಮಾಡಿಕೊಂಡು ಜನರಿಗೆ ಆಧ್ಯಾತ್ಮದ ಬೋಧನೆಯನ್ನು ಮಾಡಿದರು ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ನಗರಸಭೆ ಸದಸ್ಯ ಮಹೇಶ್, ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಅಂಗವಾಗಿ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. ಸ್ವಾಮಿ ವಿವೇಕಾನಂದರು ಒಂದೇ ಧರ್ಮಕ್ಕೆ ಸೀಮಿತವಾಗಿರಲಿಲ್ಲ. ಅವರು ಜನರಿಗೆ ಧರ್ಮಕ್ಕಿಂತ ಅನ್ನದ ಬೆಲೆಯನ್ನು ಸಾರಿ ಹೇಳಿದರು. ನಮ್ಮ ಸಂಸ್ಕೃತಿ ಮತ್ತು ಮಾತೃಭೂಮಿಯ ಬಗ್ಗೆ ವಿವೇಕಾನಂದರು ಅಪಾರವಾದ ಗೌರವ ಹೊಂದಿದ್ದರು. ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸವಾಗಿದೆ ಎಂದರು.
Kshetra Samachara
15/01/2025 04:41 pm