ಹಾಸನ: ಶಾಸನ ಬದ್ಧ ಎಂ.ಎಸ್.ಪಿ.ಗಾಗಿ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲಿಸಿ ಮತ್ತು ಜಗಜಿತ್ ದಲ್ಲೆವಾಲ್ ಜೀವ ಉಳಿಸುವಂತೆ ಆಗ್ರಹಿಸಿ ಡಿಸಿ ಕಛೇರಿ ಮುಂದೆ ರಾಜ್ಯ ರೈತ ಸಂಘದಿಂದ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಇದೇ ವೇಳೆ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಆನೆಕೆರೆ ರವಿ ಮಾತನಾಡಿ, ಕಳೆದ ೪೫ ದಿನಗಳಿಂದ ಉಪವಾಸ ನಡೆಸುತ್ತಿರುವ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ಎಂ.ಪಿ.ಎಸ್.ಗೆ ಕನಿಷ್ಠ ಬೆಂಬಲ ಬೆಲೆ, ಡಾ.ಎಂ.ಎಸ್. ಸ್ವಾಮಿನಾಥ ಅವರ ವರದಿಯ ಪ್ರಕಾರ ಸಿ೨+೫೦ ಮಾನದಂಡ ಆಧಾರವಾಗಿ ಹಾಗೂ ಶಾಸನ ಬದ್ಧವಾಗಿ ಜಾರಿಗೊಳಿಸಲು ಒತ್ತಾಯಿಸಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈಗ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಏನಾದರೂ ಅಪಾಯವಾದರೆ ಇದಕ್ಕೆ ಕೇಂದ್ರ ಸರ್ಕಾರ ಹೊಣೆಗಾರಿಕೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತಿದ್ದೇವೆ ಎಂದರು. ನಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಜಿಲ್ಲಾಧಿಕಾರಿ ಕಛೇರಿ ಮುಂದೆ ಸತ್ಯಾಗ್ರಹ ನಡೆಸುತ್ತಿದ್ದೇವೆ.
ಮಾನ್ಯ ಪ್ರಧಾನ ಮಂತ್ರಿಗಳು ರೈತರ ಜೊತೆ ಹುಡುಗಾಟಿಕೆ ನಡೆಸಿದ್ದಾರೆ. ಇದಲ್ಲದೇ ರೈತರ ತುಟಿಗೆ ತುಪ್ಪ ಸವರಿ ತಮಾಷೆ ಮಾಡುತ್ತಿದ್ದಾರೆ. ಇದೆಲ್ಲ ಒತ್ತಟ್ಟಿಗೆ ಇರಿಸಿ ಎಂ.ಪಿ.ಎಸ್. ಶಾಸನ ಬದ್ಧ ಜಾರಿಗೊಳಿಸಿ ಜಗತ್‌ಸಿಂಗ್ ದಲ್ಲೆವಾಲ್ ಅವರ ಜೀವ ಉಳಿಸುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು. ಜಿಲ್ಲೆಯಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಮಂಜೂರು ನೀಡಬೇಕು ಹಾಗೂ ಬ್ಯಾಂಕ್ ದಾರರು ಸಾಲ ಮರುಪಾವತಿಗೆ ನೋಟಿಸ್ ನೀಡುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ತಮ್ಮ ಬೇಡಿಕೆಯನ್ನು ಸರಕಾರದ ಮುಂದೆ ಇಟ್ಟರು.
PublicNext
14/01/2025 07:51 am