ಬೈಲಹೊಂಗಲ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದ ಸಂಗೊಳ್ಳಿ ಉತ್ಸವದಲ್ಲಿ ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಹಾಗೂ ಸಂಗಡಿಗರ ಸಂಗೀತ ರಸಮಂಜರಿ ಪ್ರೇಕ್ಷಕರಿಗೆ ಮುದ ನೀಡಿತು.
ರಾತ್ರಿ 11ರ ವೇಳೆಗೆ ಆರಂಭವಾದ ಸಂಗೀತ ಸಂಜೆಯ ವೇದಿಕೆಗೆ ರಾಜೇಶ್ ಕೃಷ್ಣನ್ ಆಗಮಿಸುತ್ತಿದ್ದಂತೆ ಆರ್ ಕೆ.. ಆರ್‌ಕೆ... ಎಂದು ಪ್ರೇಕ್ಷಕರು ಕರತಾಡನ ಮಾಡಿದರು. ನಂತರ ನಿರಂತರ ಎರಡು ಗಂಟೆ ಕಾಲ ಸಂಗೀತ ಸುಧೆ ಹರಿಸಿದರು. 'ಯಾರೋ... ಕಣ್ಣಲ್ಲಿ ಕಣ್ಣನಿಟ್ಟು ಮನಸಿನಲ್ಲಿ ಮನಸನಿಟ್ಟು...ಎಂಬ ಹಾಡು ಪ್ರೇಕ್ಷಕರ ಮನಸೂರೆಗೊಂಡಿತು. 'ಉಸಿರೇ ಉಸಿರೇ... ಈ ಉಸಿರ ಕೊಲ್ಲಬೇಡ, ಪುನೀತ್ ರಾಜ್ ಕುಮಾರ್ ಜತೆಗಿನ ಸ್ನೇಹ ನೆನೆದ ರಾಜೇಶ್, "ಬೊಂಬೆ ಹೇಳತೈತಿ, ಬೊಂಬೆ ಹೇಳತೈತಿ... ನೀನೇ ರಾಜಕುಮಾರ..." ಸಹಕಲಾವಿದರೊಂದಿಗೆ ನೃತ್ಯ ಮಾಡುತ್ತಾ ಹಾಡಿದಾಗ ಯುವಕ- ಯುವತಿಯರು, ಮಕ್ಕಳ ಸಹಿತ ಹಲವರು ಹೆಜ್ಜೆ ಹಾಕಿ ಮೊಬೈಲ್ ಟಾರ್ಚ್ ಆನ್ ಮಾಡಿ ಕೈ ಬೀಸಿದರು.
ಶೃತಿ ಜಾಧವ, ದೇವಾ ಶ್ರೀಗಣೇಶ, ಗಣೇಶ ಪ್ರಾರ್ಥನೆ, ಹೊಸ ಬೆಳಕು ಮೂಡುತಿದೆ, ಗಾಯಕಿ ಸುಹಾನ ಸಯ್ಯದ್ ಹಾಡಿದ ಎಲ್ಲಿ ಕಾಣೇನ್, ಎಲ್ಲಿ ಕಾಣೇನೋ, ಯಲ್ಲಮ್ಮ ನಿನ್ನ ಎಲ್ಲಿ ಕಾಣೇನ್, ಗಾಯಕಿ ಪ್ರಥ್ವಿ ಭಟ್ ಹಾಡಿದ ಕಣ್ಣು ಹೊಡಿಯಾಕ್...ಮೊನ್ನೆ ಕಲತೆನಿ ಹಾಡುಗಳು ಕೇಳುಗರನ್ನು ಮಂತ್ರಮುಗ್ಧಗೊಳಿಸಿದವು.
ಗಾಯಕ ಚಿನ್ಮಯ್ ತ್ರೇಯಾ ಹಾಡಿದ ಕನ್ನಡ ರೋಮಾಂಚನವೀ ಈ ಕನ್ನಡ..., ಈ ಕನ್ನಡ ಹೆಣ್ಣನೂ ಮರೀಬೇಡ, ಓ ಅಭಿಮಾನಿ... ಹಾಡಿಗೆ ನೆರೆದಿದ್ದ ಜನರೆಲ್ಲ ಚಪ್ಪಾಳೆ ತಟ್ಟಿ, ಪ್ರೋತ್ಸಾಹಿಸಿದರು. ಬೆಳಗ್ಗಿನ ಮೂರು ಗಂಟೆವರೆಗೂ ಸಾಂಸ್ಕೃತಿಕ ರಸದೌತಣ ಜರುಗಿತು.
Kshetra Samachara
13/01/2025 08:36 pm