ಮುಂಬೈ: 'ನನ್ನ ಹೆಂಡತಿ ಸುಂದರವಾಗಿದ್ದಾಳೆ, ಅವಳನ್ನು ನೋಡುವುದನ್ನು ಇಷ್ಟಪಡುತ್ತೇನೆ' ಎಂದು ಉದ್ಯಮಿ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರ ಅವರು ಹೇಳುವ ಮೂಲಕ ಎಲ್ & ಟಿ ಮುಖ್ಯಸ್ಥ ಎಸ್ ಎನ್ ಸುಬ್ರಹ್ಮಣ್ಯನ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ, ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಹೇಳಿದ್ದು ತೀವ್ರ ಚರ್ಚೆ ಮತ್ತು ಟೀಕೆಗೆ ಕಾರಣವಾಗಿತ್ತು. ಈ ಬೆನ್ನಲ್ಲೇ ಎಲ್ & ಟಿ ಮುಖ್ಯಸ್ಥ ಎಸ್‌ಎನ್ ಸುಬ್ರಹ್ಮಣ್ಯನ್ ಅವರು, ಉದ್ಯೋಗಿಗಳು ವಾರಕ್ಕೆ ಕನಿಷ್ಠ 90 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದಿದ್ದಾರೆ. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದೀಗ ಮಹೀಂದ್ರಾ ಗ್ರೂಪ್‌ನ ಆನಂದ್ ಮಹೀಂದ್ರ ಅವರು ವಿಶೇಷ ರೀತಿಯಲ್ಲಿ ಕುಟುಕಿದ್ದಾರೆ.
ವಿಕಸಿತ್ ಭಾರತ್ ಯುವ ನಾಯಕರ ಸಂವಾದದಲ್ಲಿ ಫಸ್ಟ್‌ಪೋಸ್ಟ್ ಮ್ಯಾನೇಜಿಂಗ್ ಎಡಿಟರ್ ಪಾಲ್ಕಿ ಶರ್ಮಾ ಅವರೊಂದಿಗೆ ಮಾತನಾಡಿದ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರು, 'ನನ್ನ ಹೆಂಡತಿ ಸುಂದರವಾಗಿದ್ದಾಳೆ, ನಾನು ಅವಳನ್ನು ನೋಡುವುದನ್ನು ಇಷ್ಟಪಡುತ್ತೇನೆ. ಆದ್ದರಿಂದಲೇ ನನಗೆ ಕಡಿಮೆ ಸ್ನೇಹಿತರಿದ್ದಾರೆ. ಹಾಗೆಂದ ಮಾತ್ರಕ್ಕೆ ನಾನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿಲ್ಲ. ನಾನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿರಲು ಕಾರಣ, ಇದೊಂದು ಅದ್ಭುತ ವ್ಯಾಪಾರ ಕೇಂದ್ರವಾಗಿರುವುದು. ಆದ್ದರಿಂದಲೇ ನನ್ನ ಒಂದು ಸಾಮಾಜಿಕ ಜಾಲತಾಣದ ಖಾತೆಯಲ್ಲಿ 11 ಮಿಲಿಯನ್ ಅನುಯಾಯಿಗಳಿದ್ದಾರೆ ಎಂದರು.
ಇನ್ನು ಅವರ ಕೆಲಸದ ಸಮಯದ ಕುರಿತು ಪ್ರಶ್ನೆ ಕೇಳಿದಾಗ, "ನಾನು ಇದನ್ನು ತಪ್ಪಿಸಲು ಬಯಸಿದ್ದೆ, ಯಾಕೆಂದರೆ ನಾನು ಕೆಲಸ ಮಾಡುವ ಸಮಯಕ್ಕಿಂತಲೂ, ಅದರ ಪ್ರಮಾಣಕ್ಕಿಂತಲೂ ನಾನು ಕೆಲಸದ ಗುಣಮಟ್ಟದ ಪ್ರಾಮುಖ್ಯತೆಯನ್ನು ಖಚಿತ ಪಡಿಸಲು ಬಯಸುತ್ತೇನೆ ಎಂದರು.
PublicNext
12/01/2025 11:04 pm