ನವದೆಹಲಿ: ವಾರಕ್ಕೆ ಕನಿಷ್ಟ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿಕೆ ನೀಡಿದ್ದ ಇನ್‌ಫೋಸಿಸ್ ಸಹಸಂಸ್ಥಾಪಕ ನಾರಾಯಣಮೂರ್ತಿ ವಿರುದ್ಧ ವಿರೋಧ ವ್ಯಕ್ತವಾಗಿತ್ತು. ಈ ಹೇಳಿಕೆಗಾಗಿ ನಾರಾಯಣಮೂರ್ತಿ ಹಲವರಿಂದ ಹಕಗು ರೀತಿ ಟ್ರೋಲ್‌ಗೆ ಒಳಗಾಗಿದ್ದಾರೆ. ಈಗ ಮತ್ತೆ ಈ ವಿಚಾರ ಮುನ್ನೆಲೆಗೆ ಬಂದಿದೆ. ಮತ್ತೊಮ್ಮೆ ನೆಟ್ಟಿಗರ ಮುಂದೆ ನಾರಾಯಣ ಮೂರ್ತಿ ರೋಸ್ಟ್ ಆಗಿದ್ದಾರೆ. ಇದಕ್ಕೆ ಕಾರಣ ಜಿಎಸ್‌ಟಿ ಪೋರ್ಟಲ್ ಡೌನ್ ಆಗಿರುವುದು. ಜಿಎಸ್‌ಟಿ ಪೋರ್ಟಲ್ ಡೌನ್ ಆಗಿದ್ದಕ್ಕೂ ನಾರಾಯಣ ಮೂರ್ತಿ ಅವರ ಆ ಹೇಳಿಕೆಗೂ ಸಂಬಂಧವೇನು ಎಂಬ ಬಗ್ಗೆ ಪ್ರಶ್ನೆ ಮೂಡಬಹುದು. ಅದಕ್ಕೆ ಉತ್ತರ ಮುಂದೆ ಇದೆ ಓದಿ..
ಜಿಎಸ್‌ಟಿ ರಿಟರ್ನ್ಸ್ ಫೈಲ್ ಮಾಡಲು ಜನವರಿ 11 ಅಂದ್ರೆ ಇವತ್ತೇ ಕೊನೆ ದಿನ. ಆದ್ರೆ ಜಿಎಸ್‌ಟಿ ಪೋರ್ಟಲ್ ಜನವರಿ 9ರಿಂದ ಡೌನ್ ಆಗಿದೆ. ಈ ಜಿಎಸ್‌ಟಿ ಪೋರ್ಟಲ್‌ಅನ್ನು ಇನ್‌ಫೋಸಿಸ್ ಸಂಸ್ಥೆ ಅಭಿವೃದ್ಧಿಪಡಿಸಿದೆ. ಜೊತೆಗೆ ನಿರ್ವಹಣೆಯನ್ನೂ ಮಾಡುತ್ತಿದೆ. ಆದ್ರೆ ಇನ್‌ಫೋಸಿಸ್ ಅಭಿವೃದ್ಧಿಪಡಿಸಿದ ಜಿಎಸ್‌ಟಿ ಪೋರ್ಟಲ್ ಡೌನ್ ಆಗಿದ್ದರಿಂದ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
'ನಾರಾಯಣಮೂರ್ತಿ ಹೇಳಿದಂತೆ 70 ಗಂಟೆ ಕೆಲಸ ಮಾಡಿದ ಪರಿಣಾಮ ಪೋರ್ಟಲ್ ಡೌನ್ ಆಗಿದೆ' ಎಂದು ಕಾಲೆಳೆಯುತ್ತಿದ್ದಾರೆ. ಇನ್ನೂ ಕೆಲವರು 'ಗಮನವಿಟ್ಟು ಕೆಲಸ ಮಾಡಿದ್ದರೆ ಪೋರ್ಟಲ್ ಡೌನ್ ಆಗುತ್ತಿರಲಿಲ್ಲ. ಆದ್ರೆ ನಾರಾಯಣಮೂರ್ತಿ 70 ಗಂಟೆ ಕೆಲಸ ಮಾಡಲು ತಮ್ಮ ಉದ್ಯೋಗಿಗಳಿಗೆ ಸೂಚಿಸಿದ್ದಾರೆ. ಅದರಂತೆ ಉದ್ಯೋಗಿಗಳು 70 ಗಂಟೆ ಕೆಲಸ ಮಾಡಿದ್ದಾರೆ. ಆದ್ರೆ ಅವರೇನು ಮಾಡಿದ್ದಾರೆ ಎಂದು ಪೋರ್ಟಲ್ ಡೌನ್ ಆಗುವಾಗ ಗೊತ್ತಾಗುತ್ತಿದೆ ಎಂದು ಹೀಗೆಳೆಯುತ್ತಿದ್ದಾರೆ.
PublicNext
11/01/2025 11:00 pm