ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೆರಿಗೆ ಹಂಚಿಕೆ ರಾಜ್ಯಕ್ಕೆ ಮತ್ತೆ ಅನ್ಯಾಯ: ಮೋದಿಗೆ ಕೇಳುವ ಧೈರ್ಯ ರಾಜ್ಯ ಬಿಜೆಪಿಗಿಲ್ಲ, ಇವರು ದೆಹಲಿ ಗುಲಾಮರಾಗಿದ್ದಾರೆ - ಸಿಎಂ ಕಿಡಿ

ಬೆಂಗಳೂರು: ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಮತ್ತೆ ಮತ್ತೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಬೇಕಾದ ಬಿಜೆಪಿ ನಾಯಕರು ದೆಹಲಿ ಗುಲಾಮರಾಗಿದ್ದಾರೆ. ಜನಪ್ರತಿನಿಧಿಗಳು ದಾರಿ ತಪ್ಪಿದಾಗ ಸರಿದಾರಿಗೆ ತರುವ ಹೊಣೆ ಜನರದ್ದಾಗಿದೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಬಿಜೆಪಿ ನಾಯಕರು ಬಾಯಿ ಬಿಟ್ಟರೆ ದೇಶಪ್ರೇಮದ ಬಗ್ಗೆ ಮಾತನಾಡುತ್ತಾರೆ. ರಾಜ್ಯವನ್ನೇ ಪ್ರೀತಿಸದವರು ದೇಶವನ್ನು ಹೇಗೆ ಪ್ರೀತಿಸಲು ಸಾಧ್ಯ ಎನ್ನುವುದನ್ನು ಇವರೇ ಹೇಳಬೇಕು. ಕೇಂದ್ರ ಸರ್ಕಾರ ಸೇಡು ತೀರಿಸಿಕೊಳ್ಳುವವರಂತೆ ಕರ್ನಾಟಕಕ್ಕೆ ನಿರಂತರವಾಗಿ ಮಾಡುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಬೇಕಿದ್ದ ರಾಜ್ಯದ ಬಿಜೆಪಿ ನಾಯಕರು ಮತ್ತು ಸಂಸದರು ಅನ್ಯಾಯಕೋರ ಕೇಂದ್ರ ಸರ್ಕಾರವನ್ನು ಸಮರ್ಥಿಸುತ್ತಿರುವುದು ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯ ಮತ್ತು ಅವಮಾನವಾಗಿದೆ. ಕೇಂದ್ರ ಸರ್ಕಾರ ಇತ್ತೀಚೆಗೆ ರಾಜ್ಯಗಳಿಗೆ ತೆರಿಗೆ ಮತ್ತು ಸುಂಕದ ಪಾಲಿನ ರೂಪದಲ್ಲಿ ಒಟ್ಟು 1,73,030 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಕರ್ನಾಟಕ ರಾಜ್ಯಕ್ಕೆ ನೀಡಿರುವ ಪಾಲು ಕೇವಲ 6,310 ಕೋಟಿ ರೂಪಾಯಿ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ಐದರಷ್ಟು ಕನ್ನಡಿಗರಿದ್ದರೂ ದೇಶದ ಜಿಡಿಪಿಯಲ್ಲಿ ಕನ್ನಡಿಗರ ಪಾಲಿನ ಪ್ರಮಾಣ ಶೇಕಡಾ 8.4 ಆಗಿದೆ. ಅತೀ ಹೆಚ್ಚು ಜಿಎಸ್‌ಟಿ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ‍್ಥಾನದಲ್ಲಿದೆ. ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹ ಶೇಕಡಾ 17ರಷ್ಟು ಹೆಚ್ಚಾಗುತ್ತಿದೆ. ಹೀಗಿದ್ದರೂ ತೆರಿಗೆ ಹಂಚಿಕೆಯಲ್ಲಿ ನಮ್ಮ ಪಾಲು ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡುತ್ತಾ ಬರಲಾಗುತ್ತಿದೆ. ಈ ಅನ್ಯಾಯ ಯಾಕೆ? ಎಂದು ಸಿಎಂ ಪ್ರಶ್ನಿಸಿದ್ದಾರೆ.

ತೆರಿಗೆ ಹಂಚಿಕೆ ಮಾಡುವಾಗಲೂ ‘’ಬಿಮಾರು’’ ರಾಜ್ಯಗಳೆಂಬ ಅಪಖ್ಯಾತಿಗೀಡಾಗಿರುವ ಬಿಹಾರ (ರೂ.17,403 ಕೋಟಿ), ಮಧ್ಯಪ್ರದೇಶ (ರೂ.13,582 ಕೋಟಿ), ರಾಜಸ್ತಾನ (ರೂ.10,426 ಕೋಟಿ) ಮತ್ತು ಉತ್ತರ ಪ್ರದೇಶಕ್ಕೆ (ರೂ.31,099 ಕೋಟಿ) ತೆರಿಗೆ ಪಾಲನ್ನು ನೀಡಿರುವ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕೇವಲ ರೂ.6,310 ಕೋಟಿ ನೀಡಿದೆ. ಇದು ಉತ್ತಮ ಆಡಳಿತ, ಸುಸ್ಥಿರ ಅಭಿವೃದ್ಧಿ ಮತ್ತು ಜಿಎಸ್‌ಟಿ ಸಂಗ್ರಹದಲ್ಲಿ ಮಾಡಿರುವ ಸಾಧನೆಗಾಗಿ ಕರ್ನಾಟಕಕ್ಕೆ ನೀಡಿರುವ ಶಿಕ್ಷೆಯೇ? ಕನ್ನಡಿಗರ ಬೆವರ ಗಳಿಕೆಯ ತೆರಿಗೆ ಹಣ ಭ್ರಷ್ಟ ರಾಜ್ಯಗಳ ಬೊಕ್ಕಸ ತುಂಬಲು ಯಾಕೆ ಬಳಕೆಯಾಗಬೇಕು? ಇದು ಕರ್ನಾಟಕದ ಪ್ರಾಮಾಣಿಕ ತೆರಿಗೆದಾರರಿಗೆ ಮಾಡಿರುವ ಘೋರ ಅನ್ಯಾಯವಲ್ಲವೇ? ಈ ಅನ್ಯಾಯವನ್ನು ಖಂಡಿಸಬೇಕಾಗಿರುವ ರಾಜ್ಯದ ಬಿಜೆಪಿ ನಾಯಕರು ನಿರ್ಲಜ್ಜರಾಗಿ ಸಮರ್ಥಿಸುತ್ತಿರುವುದು ಕನ್ನಡಿಗರಿಗೆ ಬಗೆಯುತ್ತಿರುವ ದ್ರೋಹವಾಗಿದೆ. ಇವರ ಆರ್ಭಟವೇನಿದ್ದರೂ ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಲು ಮತ್ತು ಬೀದಿಗಳಲ್ಲಿ ಪರಸ್ಪರ ಕಚ್ಚಾಡಲು ಸೀಮಿತವಾಗಿದೆ ಎಂದು ತಿಳಿಸಿದ್ದಾರೆ

ರಾಜ್ಯದಿಂದ ಆರಿಸಿಹೋಗಿರುವ ಬಿಜೆಪಿ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಎದುರು ನಿಂತು ನ್ಯಾಯ ಕೇಳುವ ಕನಿಷ್ಠ ಧೈರ್ಯವೂ ಇಲ್ಲದೆ ದೆಹಲಿ ಸರ್ಕಾರದ ಗುಲಾಮರಾಗಿದ್ದಾರೆ. ಜನಪ್ರತಿನಿಧಿಗಳು ಜನದ್ರೋಹಿಗಳಾದಾಗ ಅವರನ್ನು ಜನರೇ ವಿಚಾರಿಸಿಕೊಳ್ಳಬೇಕಾಗುತ್ತದೆ. ಕೇಂದ್ರದ ಕಿವುಡ ಸರ್ಕಾರ ಮತ್ತು ಬಿಜೆಪಿಯ ಮೂಗ ನಾಯಕರ ವಿರುದ್ಧ ಕನ್ನಡಿಗರೆಲ್ಲರೂ ಜಾತಿ, ಧರ್ಮ, ಪಕ್ಷ ಪಂಥಗಳನ್ನು ಮೀರಿ ದನಿ ಎತ್ತಬೇಕಾಗಿದೆ. ಇಂತಹದ್ದೊಂದು ಸಂಕಲ್ಪವನ್ನು ಸಂಕ್ರಮಣದ ಶುಭದಿನದಂದು ಪ್ರತಿಯೊಬ್ಬ ಕನ್ನಡಿಗರು ಕೈಗೊಂಡು ಕರ್ನಾಟಕವನ್ನು ಅನ್ಯಾಯ ಮತ್ತು ಅವಮಾನದಿಂದ ರಕ್ಷಿಸಬೇಕಾಗಿದೆ ಎಂದು ಕೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Edited By : Vijay Kumar
PublicNext

PublicNext

14/01/2025 08:45 am

Cinque Terre

62.83 K

Cinque Terre

6