ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ವಿಶ್ವದ ಅತಿದೊಡ್ಡ ಧಾರ್ಮಿಕ ಉತ್ಸವವಾದ ಮಹಾ ಕುಂಭಮೇಳ ಆರಂಭವಾಗಿದೆ. 144 ವರ್ಷಗಳಿಗೊಮ್ಮೆ ಮಹಾ ಕುಂಭಮೇಳ ನಡೆಯುತ್ತದೆ. ಪ್ರತಿ 12 ವರ್ಷಗಳಿಗೊಮ್ಮೆ ಸಾಮಾನ್ಯ ಕುಂಭಮೇಳ ನಡೆಯುತ್ತದೆ. ಈ ಮಹಾಕುಂಭ ಮೇಳದಲ್ಲಿ ಕಾಣಿಸಿಕೊಂಡ ಮಹಾ ಸಾಧುವೊಬ್ಬರು ಭಾರಿ ಸುದ್ದಿಯಾಗಿದ್ದಾರೆ.
ಐಐಟಿ ಬಾಬಾ ಎಂದು ಕರೆಯಲ್ಪಡುವ ಅಭಯ್ ಸಿಂಗ್ ಅಲಿಯಾಸ್ ಮಸಾನಿ ಗೋರಖ್ ಇವರು ಮಹಾ ಕುಂಭ ಮೇಳದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಧ್ಯಮವೊಂದರ ಸಂದರ್ಶನದಲ್ಲಿ ಅವರು ನೀಡಿದ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ. ನಗು ಮುಖ, ಉಲ್ಲಾಸಭರಿತ ನಡವಳಿಕೆಯುಳ್ಳ ಐಐಟಿ ಬಾ ಮಸಾನಿ ಗೋರಖ್ ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆಯಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದಾರೆ. ಅವರು ವಿಜ್ಞಾನವನ್ನು ತೊರೆದು ಆಧ್ಯಾತ್ಮದ ಮಾರ್ಗ ಹಿಡಿದಿದ್ದಾರೆ.
ಬಾಬಾ ಇಂಗ್ಲೀಷ್‌ನಲ್ಲಿ ಮಾತನಾಡುವ ಲಯ ಹಾಗೂ ವಿಷದ ಬಗ್ಗೆ ಇದ್ದ ಜ್ಞಾನವನ್ನು ಕಂಡು ಅವರ ಓದಿನ ಬಗ್ಗೆ ಪತ್ರಕರ್ತ ಪ್ರಶ್ನೆ ಮಾಡಿದ್ದಾರೆ. 'ನೀವು ತುಂಬಾ ಚೆನ್ನಾಗಿ ಮಾತನಾಡುತ್ತೀರಿ. ಶಿಕ್ಷಣ ಪಡೆದಿರುವ ಹಾಗೆ ಕಾಣುತ್ತಿದೆ' ಎಂದು ಪತ್ರಕರ್ತ ಹೇಳಿದ್ದಾರೆ. ಇದಕ್ಕೆ ಉತ್ತರ ನೀಡುವ ಬಾಬಾ, ನಾನು ಐಐಟಿ ಬಾಂಬೆಯಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಇದನ್ನು ಕೇಳುತ್ತಿದ್ದ ಹಾಗೆ ಸಂದರ್ಶನ ಮಾಡುತ್ತಿದ್ದ ಪತ್ರಕರ್ತ ದಂಗಾಗಿದ್ದಾರೆ. ಮತ್ತೊಮ್ಮೆ ಖಚಿತಪಡಿಸಿಕೊಳ್ಳಲು ನೀವು ಐಐಟಿ ಬಾಂಬೆಯಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್ ಮಾಡಿದ್ದು ಹೌದಾ ಎಂದು ಕೇಳಿದ್ದಾರೆ. ಇದಕ್ಕೆ ಹೌದು ಎಂದು ಅವರು ಉತ್ತರಿಸಿದ್ದಾರೆ. ಬಳಿಕ ಬಾಬಾನ ಹೆಸರು ಅಭಯ್ ಸಿಂಗ್ ಎಂದು ತಿಳಿಸುತ್ತಾರೆ.
'ಈ ಹಂತಕ್ಕೆ ನೀವು ಬಂದಿದ್ದು ಹೇಗೆ' ಎನ್ನುವ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಬಾಬಾ, ಈ ಸ್ಥಿತಿಯೇ ಉತ್ತಮ ಸ್ಥಿತಿ ಎನ್ನುವ ನಂಬಿಕೆ ನನಗೆ ಬಂದಿದೆ ಎಂದು ಉತ್ತರ ನೀಡಿದ್ದಾರೆ. ಪ್ರತಿ ಹಂತದಲ್ಲೂ ನೀವು ಜ್ಞಾನಾರ್ಜನೆ ಮಾಡುತ್ತಲೇ ಹೋದಾಗ ನೀವು ಎಲ್ಲಿಗೆ ಹೋಗಿ ಮುಟ್ಟುತ್ತೀರಿ ಅನ್ನೋದಕ್ಕೆ ನಾನೇ ಉದಾಹರಣೆ ಎಂದು ತಿಳಿಸಿದ್ದಾರೆ.
ಹರ್ಯಾಣದಲ್ಲಿ ಜನಿಸಿದ ಅಭಯ್ ಸಿಂಗ್ ಬಾಬಾ, ಐಐಟಿ ಬಾಂಬೆಯಲ್ಲಿ ನಾಲ್ಕು ವರ್ಷಗಳ ಕಾಲ ಏರೋಸ್ಪೇಸ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದಾರೆ. ಅದಾದ ಬಳಿಕ, ಕಲಾ ಕ್ಷೇತ್ರದ ಬಗ್ಗೆ ಗಮನ ನೀಡಿದ ಅವರು, ಮಾಸ್ಟರ್ಸ್ ಇನ್ ಡಿಸೈನ್‌ಅನ್ನೂ ಕಲಿತಿದ್ದರು.
ನೀವು ಜೀವನದ ಅರ್ಥವನ್ನು ಹುಡುಕಲು ಪ್ರಯತ್ನ ಮಾಡುತ್ತೀರಿ. ನಾನು ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುವಾಗಲೂ, ನಾನು ತತ್ವಶಾಸ್ತ್ರದ ಕೋರ್ಸ್‌ಗಳನ್ನು ಮಾಡಿದ್ದೆ. ನವೋತ್ತರತಾವಾದ, ಸಾಕ್ರಟೀಸ್, ಪ್ಲೇಟೋ ಮುಂತಾದರ ಬರಹಗಳನ್ನು ಜೀವನದ ಅರ್ಥವನ್ನು ತಿಳಿದುಕೊಳ್ಳಲು ಓದುತ್ತಿದ್ದೆ' ಎಂದು ಅವರು ಹೇಳಿದರು.
ಐಐಟಿ ಪದವೀಧರ ಬಾಬಾ ಮತ್ತು ಪತ್ರಕರ್ತನ ನಡುವಿನ ಸಂವಾದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕಾಮೆಂಟ್‌ಗಳ ವಿಭಾಗದಲ್ಲಿ ಅನೇಕ ಜನರು ಹಣದ ಬದಲು ಜ್ಞಾನವನ್ನು ಅನುಸರಿಸಿದ್ದಕ್ಕಾಗಿ ಸಿಂಗ್ ಅವರನ್ನು ಹೊಗಳಿದ್ದಾರೆ. ಮಹಾ ಕುಂಭಮೇಳವು ನಿನ್ನೆ ಜನವರಿ 13 ರಂದು ಪ್ರಾರಂಭವಾಗಿ ಫೆಬ್ರವರಿ 26 ರವರೆಗೆ ನಡೆಯಲಿದೆ.
PublicNext
15/01/2025 09:28 am