ಹುಬ್ಬಳ್ಳಿ : ಅದೊಂದು ಅದ್ಭುತ ಅನುಭವಕ್ಕೆ ಸಾಕ್ಷಿಯಾಗಿರುವ ಮ್ಯೂಸಿಯಂ. ಹುಬ್ಬಳ್ಳಿಯ ಮೇರು ವ್ಯಕ್ತಿತ್ವವನ್ನು ನಾಡಿಗೆ ಪರಿಚಯಿಸುವ ಹಾಗೂ ಸಾಧನೆಯನ್ನು ಮೆಲುಕು ಹಾಕುವ ಮ್ಯೂಸಿಯಂ. ಇಂತಹದೊಂದು ಮ್ಯೂಸಿಯಂಗೆ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಭೇಟಿ ನೀಡಿ ಅವಿಸ್ಮರಣೀಯ ಕ್ಷಣಗಳನ್ನು ಅನುಭವಿಸುವ ಮೂಲಕ ಸಾಧಕರ ಜೀವನದ ದಾರಿಯನ್ನು ಮತ್ತೊಮ್ಮೆ ಕಣ್ಣಾರೆ ಕಂಡಿದ್ದಾರೆ.
ಹುಬ್ಬಳ್ಳಿಯ ಕೀರ್ತಿಯನ್ನು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ ಮೇರು ವ್ಯಕ್ತಿತ್ವ ಸರ್ ಸಿದ್ಧಪ್ಪ ಕಂಬಳಿಯವರದು. ಈ ನಿಟ್ಟಿನಲ್ಲಿ ಸರ್ ಸಿದ್ಧಪ್ಪ ಕಂಬಳಿಯವರ ಸವಿನೆನಪಿಗಾಗಿ ಮೆಮೋರಿಯಲ್ ಮ್ಯೂಸಿಯಂ, ಮೆಮೋರಿಯಲ್ ಟ್ರಸ್ಟ್ ನಿರ್ಮಾಣ ಮಾಡಲಾಗಿದೆ.
ಹೌದು..ಹುಬ್ಬಳ್ಳಿಯ ಅಳಗುಂಡಗಿ ಓಣಿಯಲ್ಲಿ ಸರ್.ಸಿದ್ಧಪ್ಪ ಕಂಬಳಿಯವರ ಜೀವನದ ಚಿತ್ರಣವನ್ನು ಉಣಬಡಿಸುವ ವಿನೂತನ ಮ್ಯೂಸಿಯಂ ನಿರ್ಮಾಣ ಮಾಡಲಾಗಿದ್ದು, ಶಾಸಕ ಮಹೇಶ ಟೆಂಗಿನಕಾಯಿ ಮ್ಯೂಸಿಯಂಗೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ. ಅಲ್ಲದೇ ಯುವ ಪೀಳಿಗೆಗೆ ಸೂಕ್ತ ರೀತಿಯಲ್ಲಿ ಪರಿಚಯಿಸುವ ಮ್ಯೂಸಿಯಂ ಸದುಪಯೋಗ ಹುಬ್ಬಳ್ಳಿಯ ಜನರು ಹಾಗೂ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಇನ್ನೂ ಸರ್ ಸಿದ್ಧಪ್ಪ ಕಂಬಳಿಯವರ ಜೀವನ ಚರಿತ್ರೆಯನ್ನು ಪರಿಚಯಿಸುವ ಸದುದ್ದೇಶದಿಂದ ನಿರ್ಮಾಣ ಮಾಡಿರುವ ಮೆಮೋರಿಯಲ್ ಮ್ಯೂಸಿಯಂ ಹಾಗೂ ಟ್ರಸ್ಟ್ ಗೆ ಶ್ರಮಿಸಿದ ವಿರೇಶ ಕುಲಕರ್ಣಿ, ಲಿಂಗರಾಜ ಕಂಬಳಿ ಅವರೊಂದಿಗೆ ಶಾಸಕರು ಸಮಾಲೋಚನೆ ನಡೆಸಿ ಮ್ಯೂಸಿಯಂ ನಿರ್ಮಾಣದ ಬಗ್ಗೆ ಹಾಗೂ ವಸ್ತುಗಳನ್ನು ಸಂಗ್ರಹದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಲ್ಲದೆ ಇಂತಹದೊಂದು ಮ್ಯೂಸಿಯಂ ಬಗ್ಗೆ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಹುಬ್ಬಳ್ಳಿಯಿಂದ ಮುಂಬೈ ಪ್ರಾಂತ್ಯದ ಸಚಿವರಾಗಿ ಸಾಕಷ್ಟು ಸಾಧನೆ ಮಾಡಿರುವ ಸಾಧಕರು ಸರ್. ಸಿದ್ಧಪ್ಪ ಕಂಬಳಿ. ಹುಬ್ಬಳ್ಳಿಯ ಕೀರ್ತಿಯನ್ನು ಹೆಚ್ಚಿಸುವುದರ ಜೊತೆಗೆ ಸಮಾನತೆ, ಶಿಕ್ಷಣ, ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಸರ್ ಸಿದ್ಧಪ್ಪ ಕಂಬಳಿಯವರ ಹೆಸರಲ್ಲಿ ನಿರ್ಮಾಣಗೊಂಡಿರುವ ಮ್ಯೂಸಿಯಂ, ಸಾಧಕರು ಜೀವನದ ಚಿತ್ರಣವನ್ನು ಕಣ್ಣು ತುಂಬಿಕೊಳ್ಳಬಹುದಾಗಿದೆ.
ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/01/2025 08:58 pm