ತುಮಕೂರು : ಜಿಲ್ಲೆಯಲ್ಲಿ ಕಳೆದ 2024 ರ ಏಪ್ರಿಲ್ ಮಾಹೆಯಿಂದ ಡಿಸೆಂಬರ್‌ವರೆಗೆ ಒಟ್ಟು 13 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿದ್ದು, ಬಾಲ್ಯ ವಿವಾಹವನ್ನು ತಡೆಯುವ ನಿಟ್ಟಿನಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಭೆಯಲ್ಲಿ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 2 ಮತ್ತು 3 ನೇ ತ್ರೈಮಾಸಿಕಕ್ಕೆ ಸಂಬಂಧಿಸಿದಂತೆ ಗುರುವಾರ ಜರುಗಿದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಬಾಲ್ಯ ವಿವಾಹಗಳು ನಡೆಯುವಾಗ ಅಧಿಕಾರಿಗಳ ಗಮನಕ್ಕೆ ಯಾಕೆ ಬಂದಿಲ್ಲ? ಇಂತಹ ಪ್ರಕರಣಗಳು ಮರುಕಳಿಸಬಾರದು. ಕರ್ತವ್ಯ ನಿರ್ಲಕ್ಷತೆ ತೋರುವ ಯಾವುದೇ ಸಿಬ್ಬಂದಿಯನ್ನು ಸೇವೆಯಲ್ಲಿ ಮುಂದುವರೆಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ ಅವರು, ಬಾಲ್ಯ ವಿವಾಹಗಳನ್ನು ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ಕೂಡಲೇ ತಾಲ್ಲೂಕುವಾರು ವರದಿ ನೀಡಬೇಕು ಎಂದು ನಿರ್ದೇಶನ ನೀಡಿದರು.
ಬಾಲ್ಯ ವಿವಾಹಗಳು ನಡೆಯದಂತೆ ತಡೆಯಲು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಾಂತ್ವನ ಕೇಂದ್ರಗಳ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಸಾಂತ್ವನ ಕೇಂದ್ರಗಳು ಮಹಿಳೆಯರು ಸುಲಭವಾಗಿ ಗುರುತಿಸಿರುವ ಸ್ಥಳದಲ್ಲಿರಬೇಕು. ಕೇಂದ್ರದಲ್ಲಿ ಶೋಷಣೆಗೊಳಗಾದ, ನೊಂದ ಮಹಿಳೆಯರ ರಕ್ಷಣೆ, ಕಾನೂನಿನ ನೆರವು, ತಾತ್ಕಾಲಿಕ ಆಶ್ರಯ, ಆಪ್ತ ಸಮಾಲೋಚನೆ ಇತ್ಯಾದಿ ನೆರವುಗಳನ್ನು ಒದಗಿಸಬೇಕು. ಸಾಂತ್ವನ ಕೇಂದ್ರಗಳಲ್ಲಿ ಸ್ವೀಕರಿಸಲಾದ ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ಶೀಘ್ರವಾಗಿ ವಿಲೇ ಮಾಡಬೇಕೆಂದು ಸೂಚನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚೇತನ್ ಕುಮಾರ್ ಮಾತನಾಡಿ, ಸ್ವೀಕಾರ ಕೇಂದ್ರ, ಸಖಿ ಒನ್ ಸ್ಟಾಪ್ ಸೆಂಟರ್, ಉದ್ಯೋಗಿನಿ ಯೋಜನೆ, ಚೇತನ ಯೋಜನೆ, ಧನಶ್ರೀ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಮಾಹಿತಿಯನ್ನು ಸಭೆಗೆ ತಿಳಿಸಿದರು.
ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಿನೇಶ್, ವಿವಿಧ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು
Kshetra Samachara
11/01/2025 08:45 am