ಶಿವಮೊಗ್ಗ : ಮ್ಯಾಮ್ ಕೋಸ್ ಶಿವಮೊಗ್ಗದ ಆಡಳಿತ ಮಂಡಳಿಯ 2025 ನೇ ಸಾಲಿನ ಚುನಾವಣೆಯನ್ನು ಫೆಬ್ರವರಿ 4 ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿಯಮಿತದ ರಿಟರ್ನಿಂಗ್ ಅಧಿಕಾರಿ ಹಾಗೂ ತುಂಗಾ ಮೇಲ್ದಂಡೆ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ರವಿಚಂದ್ರನ್ ನಾಯಕ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಮಧ್ಯಾಹ್ನ 3 ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪ್ರಸ್ತುತ ಸಂಘದಲ್ಲಿ 18 ಚುನಾಯಿತ ನಿರ್ದೇಶಕರ ಸ್ಥಾನಗಳು ತೆರವಾಗಲಿದೆ. 19 ನಿರ್ದೇಶಕ ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿ 1, ಪರಿಶಿಷ್ಟ ಪಂಗಡ 1, ಮಹಿಳೆ 2, ಹಿಂದುಳಿದ ವರ್ಗ 2 ಮೀಸಲು ಸ್ಥಾನಗಳಾಗಿದ್ದು, ಸಾಮಾನ್ಯ ಸ್ಥಾನಗಳು 13 ಇರುತ್ತದೆ. ಮ್ಯಾಮ್ ಕೋಸ್ ಆಡಳಿತ ಮಂಡಳಿಯಲ್ಲಿ ಒಟ್ಟು 33648 ಸದಸ್ಯರಿದ್ದು, ಅದರಲ್ಲಿ 11580 ಜನ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ ಎಂದು ಹೇಳಿದರು.
ಸಂಘದ ಕಾರ್ಯವ್ಯಾಪ್ತಿಯು, ಕರ್ನಾಟಕ ರಾಜ್ಯದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಎಲ್ಲಾ ತಾಲ್ಲೂಕುಗಳು ಹಾಗೂ ದಾವಣೆಗೆರೆ ಜಿಲ್ಲೆಯ ಹೊನ್ನಾಳಿ, ನ್ಯಾಮತಿ ಮತ್ತು ಚನ್ನಗಿರಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಿಗೆ ಸೀಮಿತವಾಗಿರುತ್ತದೆ ಎಂದರು. ತಾತ್ಕಾಲಿಕವಾಗಿ ಜಿಲ್ಲಾವಾರು ಮತ್ತು ತಾಲ್ಲೂಕುವಾರು 9 ಮತದಾನ ಕೇಂದ್ರಗಳಿದ್ದು, ಅವುಗಳು ಶಿವಮೊಗ್ಗ, ಸಾಗರ, ಭದ್ರಾವತಿ, ತೀರ್ಥಹಳ್ಳಿ, ಹೊಸನಗರ, ತರೀಕೆರೆ, ಕೊಪ್ಪ, ಶೃಂಗೇರಿ ಮತ್ತು ಚನ್ನಗಿರಿ ಕೇಂದ್ರಗಳಾಗಿದ್ದು, ಇಲ್ಲಿ ಮತದಾನವಾಗುವಂತೆ ನೋಡಿಕೊಳ್ಳಲು ಯೋಜಿಸಲಾಗಿದೆ.
ಮಸ್ಟರಿಂಗ್ ಮತ್ತು ಡಿ- ಮಸ್ಟರಿಂಗ್ ಪ್ರಕ್ರಿಯೆ ಮತ್ತು ಮತ ಎಣಿಕೆ ಪ್ರಕ್ರಿಯೆಯು ಶಿವಮೊಗ್ಗ ಎ.ಪಿ.ಎಂ.ಸಿ. ಆವರಣದಲ್ಲಿರುವ ಮ್ಯಾಮ್ ಕೋಸ್ ಸಭಾಂಗಣದಲ್ಲಿ ನಡೆಯುತ್ತದೆ. ಡಿ-ಮಸ್ಟರಿಂಗ್ ಆದ ತಕ್ಷಣ ಮತ ಎಣಿಕೆ ಪ್ರಾರಂಭವಾಗುತ್ತದೆ ಹಾಗೂ ಮತ ಎಣಿಕೆಯಾದ ಕೂಡಲೇ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದರು.
Kshetra Samachara
10/01/2025 04:57 pm