ಗದಗ - ಆ ಭಾಗದಲ್ಲಿ ಆಗಾಗ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಜನ್ರ ನಿದ್ದೆಗೆಡಿಸಿದೆ. ಜನ ಮನೆಯಿಂದ ಹೊರಬರಲು ಭಯ ಪಡ್ತಿದ್ದಾರೆ. ಜಮೀನು ಕೆಲಸಕ್ಕೆ ಹೋಗಲು ಹತ್ತಾರು ಜನ ಸೇರಿಕೊಂಡು ದೊಣ್ಣೆ, ಬಡಿಗೆ ಇತರೆ ಆಯುಧಗಳನ್ನು ಹಿಡಿದುಕೊಂಡು ಹೋಗುವ ಅನಿವಾರ್ಯತೆ ಎದುರಾಗಿದೆ. ಚಿರತೆ ಸೆರೆಹಿಡಿಯುವಲ್ಲಿ ವಿಫಲವಾದ ಅರಣ್ಯ ಇಲಾಖೆ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜನ್ರ ನಿದ್ರೆ ಕೆಡಿಸಿದ ಚಿರತೆ ಕುರಿತಾದ ವರದಿ ಇಲ್ಲಿದೆ ನೋಡಿ.
ಈ ಎಲ್ಲಾ ದೃಶ್ಯಗಳು ಕಂಡು ಬರೋದು ಗದಗ ತಾಲೂಕಿನ ಅಸುಂಡಿ ಗ್ರಾಮದಲ್ಲಿ. ಹೌದು, ಅಸುಂಡಿ, ಬಿಂಕದಕಟ್ಟಿ, ಹುಲಕೋಟಿ, ಕುರ್ತಕೋಟಿ, ಮಲ್ಲಸಮುದ್ರ ಭಾಗದಲ್ಲಿ ಆಗಾಗ ಚಿರತೆ ಕಾಣಿಸಿಕೊಳ್ಳುತ್ತಿದೆ. ಇದರಿಂದ ಜನ್ರಲ್ಲಿ ಆಂತಕ ಶುರುವಾಗಿದೆ. ಜನ್ರು ಮನೆಯಿಂದ ಹೊರಗೆ ಬರ್ತಿಲ್ಲ. ಜಮೀನುಗಳಿಗೆ ಹೋಗಲು ಭಯ ಪಡ್ತಿದ್ದಾರೆ. ನಿನ್ನೆ ಸುಭದ್ರಮ್ಮ ಹೊಸಮನಿ ಎಂಬುವರ ಜಮೀನಿನಲ್ಲಿ ಚಿರತೆ ಕಾಣಿಸಿಕೊಂಡಿದೆ. ಅಜ್ಜಿ ಮಗನೊಂದಿಗೆ ಜಮೀನಿಗೆ ಹೋಗಿದ್ದಾಳೆ. ಜೋಳದ ಜಮೀನಿನಲ್ಲಿ ನಾಯಿ ಬೇಟೆಗಾಗಿ ಚಿರತೆ ಅವಿತು ಕುಳಿತಿದೆ. ನಾಯಿ ಬೆನ್ನು ಹತ್ತಿ ಅಜ್ಜಿ ಬಳಿಯೇ ಹಾಯ್ದು ಹೋಗಿದೆ. ದಿಢೀರ್ ನೆ ನೋಡಿದ ಅಜ್ಜಿ, ಭಯಗೊಂಡಿದ್ದಾಳೆ. ದಯವಿಟ್ಟು ಚಿರತೆ ಸೆರೆಹಿಡಿದು ಜನ್ರ ಆತಂಕ ದೂರಮಾಡ್ರಿ. ಯಾರಿಗಾದ್ರೂ ಏನಾದ್ರೂ ಅನಾಹುತ ಮಾಡಿದ್ರೆ ಅದಕ್ಕೆ ಅರಣ್ಯ ಇಲಾಖೆಯೇ ಕಾರಣ ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾಳೆ, ಪ್ರತ್ಯಕ್ಷ ದರ್ಶಿ ಅಜ್ಜಿ ಸುಭದ್ರಮ್ಮ.
ಅಸುಂಡಿ ಭಾಗದ ಅನೇಕ ನಾಯಿಗಳು, ಹಸು, ಕರುಗಳನ್ನು ಬೇಟೆ ಆಡ್ತಿದೆ. ಈ ಬಗ್ಗೆ ಸಂಬಂಧಿಸಿದ ಅರಣ್ಯ ಇಲಾಖೆ ಗಮನಕ್ಕೂ ತರಲಾಗಿದೆ. ಯಾವಾಗಲೋ ಒಮ್ಮೆ ಬಂದು ಡ್ರೋನ್ ಕ್ಯಾಮೆರಾ ಹಾರಿಸಿ ಕಾಣ್ತಿಲ್ಲ ಅಂತ ಅರಣ್ಯ ಇಲಾಖೆ ಸಿಬ್ಬಂದಿ ಕೈತೊಳೆದುಕೊಳ್ಳುತ್ತಿದ್ದಾರಂತೆ. ಜೋಳ, ಕಬ್ಬು, ಮೆಕ್ಕೆಜೋಳ, ಹಳ್ಳ, ನಾಲೆಯಲ್ಲಿ ಆಗಾಗ ಚಿರತೆ ಕಾಣಿಸಿಕೊಳ್ಳುತ್ತಿದೆಯಂತೆ. ನೋಡಿದ ಪ್ರತ್ಯಕ್ಷದರ್ಶಿಗಳು ಗ್ರಾಮ ಪಂಚಾಯತ್ ಗೆ ತಿಳಿಸಿದ್ದಾರೆ. ಚಿರತೆ ಬಗ್ಗೆ ಗ್ರಾಮ ಪಂಚಾಯತ್ ವಾಹನ ಮೈಕ್ ಮೂಲಕ ಎಚ್ಚರಿಕೆ ಸಂದೇಶ ನೀಡ್ತಿದ್ದಾರೆ. ಇದರಿಂದ ಮತ್ತಷ್ಟು ಭಯ ಶುರುವಾಗಿದೆ. ಚಿರತೆ ಕಾರ್ಯಾಚರಣೆ ಬಗ್ಗೆ ಅಧಿಕಾರಿಗಳು ಡೋಂಟ್ ಕೇರ್ ಅಂತಿದ್ದಾರೆ. ಯಾರಿಗಾದ್ರೂ ಅನಾಹುತ ಮಾಡಿದ್ರೆ ಅದಕ್ಕೆ ಅರಣ್ಯ ಇಲಾಖೆಯೇ ಕಾರಣ. ದಯವಿಟ್ಟು ಚಿರತೆ ಸೆರೆಹಿಡಿದು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿ ಅಂತಿದ್ದಾರೆ ಸ್ಥಳೀಯರು.
ಅಸುಂಡಿ ಸೇರಿದಂತೆ ಸುತ್ತಲಿನ ಭಾಗದ ಜನ್ರು ಜಮೀನಿಗೆ ಹೋಗಬೇಕು ಅಂದ್ರೆ ಭಯ ಪಡ್ತಿದ್ದಾರೆ. ಕಡಲೆ, ಮೆಣಸಿನಕಾಯಿ ಬೆಳೆ ರಾಶಿ ಮಾಡಲು, ನೀರು ಹಾಯಿಸಲು ಅನಿವಾರ್ಯ ಹೊಗಲೇಬೇಕು ಅಂದವ್ರು, ಹತ್ತಾರು ಜನ್ರು ಒಟ್ಟಾಗಿ ದೊಣ್ಣೆ, ಬಡಿಗೆ ಹಿಡಿದುಕೊಂಡು ಕೂಗುತ್ತಾ ಒಟ್ಟಾಗಿ ಹೋಗುವ ಅನಿವಾರ್ಯತೆ ಎದುರಾಗಿದೆ. ಅರಣ್ಯ ಇಲಾಖೆ ಕಾರ್ಯಾಚರಣೆ ಮೂಲಕ ಆದಷ್ಟು ಬೇಗ ಚಿರತೆ ಸೆರೆ ಹಿಡಿದು, ಜನ್ರಲ್ಲಿರುವ ಭಯ, ಆತಂಕ ದೂರ ಮಾಡಲಿ ಎಂಬುದು ಎಲ್ಲರ ಬೇಡಿಕೆಯಾಗಿದೆ.
ಮಲ್ಲಿಕಾರ್ಜುನ, ಪಬ್ಲಿಕ್ ನೆಕ್ಸ್ಟ್ , ಗದಗ
PublicNext
10/01/2025 02:48 pm