ಸೋಮವಾರಪೇಟೆ : ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಮಳಿಗೆಗಳ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಗೊಂದಲಗಳು ಮುಂದುವರೆದಿದ್ದು, ಪ.ಪಂ.ನ ಕೆಲವೊಂದು ತಪ್ಪು ಹೆಜ್ಜೆಗಳಿಂದಾಗಿ ದಿನಕ್ಕೊಂದು ಸಮಸ್ಯೆಗಳು ಎದುರಾಗುತ್ತಲೇ ಇವೆ.
ಪಟ್ಟಣ ಪಂಚಾಯಿತಿಯ ಮಳಿಗೆಗಳ ಹರಾಜು ಎಂಬುದು ಮಧ್ಯವರ್ತಿಗಳಿಗೆ ಹಬ್ಬದೂಟದಂತಾಗಿದೆ ಎಂಬುದು ಈಗಿರುವ ವರ್ತಕರ ಆರೋಪವಾಗಿದ್ದು, ಸೆಟಲ್‌ಮೆಂಟ್‌ಗೆ ಇರುವ ಕೆಲವರಿಂದಾಗಿ ಬಡ ವರ್ತಕರು ಅತಂತ್ರರಾಗಿದ್ದಾರೆ. ಹಣವಂತರು ಇಂತಹ ಮಧ್ಯವರ್ತಿಗಳಿಗೆ ಲಕ್ಷಗಟ್ಟಲೆ ಹಣ ನೀಡಿ ಅಂಗಡಿಯನ್ನು ಉಳಿಸಿಕೊಂಡಿದ್ದಾರೆ. ಬಡ ವರ್ತಕರು ಬೀದಿಗೆ ಬೀಳುವ ಸನ್ನಿವೇಶ ಸೃಷ್ಟಿಯಾಗಿದೆ ಎಂಬುದು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿಯೂ ಪ್ರತಿಧ್ವನಿಸಿತ್ತು. ಇವೆಲ್ಲದರ ನಡುವೆ ಟೆಂಡರ್ ಪ್ರಕ್ರಿಯೆ ಅನುಷ್ಠಾನಕ್ಕೆ ಹೈಕೋರ್ಟ್ ಮತ್ತೆ ತಡೆ ನೀಡಿದೆ.
ಪಟ್ಟಣದ ವರ್ತಕರಾದ ಬಿ.ಜಿ. ಅಭಿಷೇಕ್ ಮತ್ತು ಯಶೋಧ ಆರ್. ಶೆಟ್ಟಿ ಅವರುಗಳು ಪ.ಪಂ. ಮಳಿಗೆ ಹರಾಜಿನಲ್ಲಿ ಹಲವಷ್ಟು ಲೋಪದೊಷಗಳಿದ್ದು, ಟೆಂಡರ್‌ನಲ್ಲಿ ಅಕ್ರಮ ನಡೆದಿದೆ. ನಿಯಮಾವಳಿಯ ಪ್ರಕಾರ ಪ್ರಕ್ರಿಯೆ ನಡೆಸದೇ ಇರುವುದರಿಂದ ನಮಗೆ ಅನ್ಯಾಯವಾಗಿದೆ ಎಂದು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಜಿಲ್ಲಾಧಿಕಾರಿಗಳು, ಪಟ್ಟಣ ಪಂಚಾಯಿತಿ, ಪ.ಪಂ. ಮುಖ್ಯಾಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದ್ದು, ಕಳೆದ 13.12.2024 ರಂದು ಪಟ್ಟಣ ಪಂಚಾಯಿತಿ ತೆಗೆದುಕೊಂಡ ನಿರ್ಣಯದ ಅನುಷ್ಠಾನಕ್ಕೆ ಇದೀಗ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ಕಳೆದ ಅಕ್ಟೋಬರ್‌ನಲ್ಲಿ ನಡೆದ ಇಲ್ಲಿನ ಪಟ್ಟಣ ಪಂಚಾಯಿತಿಗೆ ಒಳಪಡುವ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ, ಮಧ್ಯವರ್ತಿಗಳು ಡೀಲ್ ಮಾಡಿಕೊಳ್ಳುವ ಮೂಲಕ ಇಡೀ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮವಾಗಿದೆ. ಈಗಾಗಲೇ ನಡೆದಿರುವ ಟೆಂಡರ್ ರದ್ದುಪಡಿಸಿ, ಮತ್ತೊಮ್ಮೆ ಇ-ಟೆಂಡರ್ ಮಾಡಬೇಕೆಂದು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
Kshetra Samachara
09/01/2025 05:50 pm