ಧಾರವಾಡ: ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಆಗಲೇಬೇಕು ಎಂದು ದಶಕಗಳ ಕಾಲ ಹೋರಾಟ ನಡೆದಿತ್ತು. ಆದರೆ, ಕೊನೆಗೂ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಲು ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಇದು ಪ್ರತ್ಯೇಕ ಪಾಲಿಕೆ ಹೋರಾಟಗಾರರಿಗೆ ಸಿಕ್ಕ ಯಶಸ್ಸು. ಆದರೆ, ಪ್ರತ್ಯೇಕ ಪಾಲಿಕೆ ಆಗಿದ್ದು ನಮ್ಮಿಂದ ಎಂದು ಕಾಂಗ್ರೆಸ್ ಮತ್ತು ಬಿಜೆಪಿಯವರ ಮಧ್ಯೆ ಇದೀಗ ಬ್ಯಾನರ್ ಬಡಿದಾಟ-ತಿಕ್ಕಾಟ ಶುರುವಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ...
ಹೀಗೆ ತಮ್ಮ ತಮ್ಮ ನಾಯಕರ ಫೋಟೋಗಳನ್ನು ಹಾಕಿ ಪ್ರತ್ಯೇಕ ಪಾಲಿಕೆ ಮಾಡಿಕೊಟ್ಟ ತಮಗೆ ಧನ್ಯವಾದ ಎಂದು ಶುಭ ಕೋರಿ ಹಾಕಿರುವ ಬ್ಯಾನರ್‌ಗಳು. ಒಂದೆಡೆ ಕಾಂಗ್ರೆಸ್ ಬ್ಯಾನರ್ ಆದರೆ, ಮತ್ತೊಂದೆಡೆ ಬಿಜೆಪಿಯದ್ದು. ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಆಗಿದ್ದು ಯಾರಿಂದ ಎಂಬುದೇ ಜನರಿಗೆ ಕನ್‌ಫ್ಯೂಸ್ ಆಗಿದೆ. ಮೊದಲು ಪ್ರತ್ಯೇಕ ಪಾಲಿಕೆ ಮಾಡಲು ಧ್ವನಿ ಎತ್ತಿದ್ದೇ ನಾವು ಎಂದು ಬಿಜೆಪಿಯವರು ಹೇಳಿದರೆ, ಬಿಜೆಪಿ ಸರ್ಕಾರ ಇದ್ದಾಗ ಏನೂ ಮಾಡದ ಬಿಜೆಪಿಯವರು ಈಗ ಕಾಂಗ್ರೆಸ್ ಸರ್ಕಾರ ಮಾಡಿದ ಪ್ರತ್ಯೇಕ ಪಾಲಿಕೆಯನ್ನು ತಾವೇ ಮಾಡಿದ್ದು ಎಂದು ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್‌ನವರು ಬಿಜೆಪಿಯವರ ಕುರಿತು ಲೇವಡಿ ಮಾಡುತ್ತಿದ್ದಾರೆ.
ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇತ್ತು. ಆಗ ಏನೂ ಮಾಡದ ಬಿಜೆಪಿಯವರಿಗೆ ಕೊಟ್ಟ ಕುದುರೆಯನ್ನೇ ಏರಲಾಗಲಿಲ್ಲ. ಈಗ ನಮ್ಮ ಸರ್ಕಾರ ಮಾಡಿದ ಕೆಲಸವನ್ನು ತಾವು ಮಾಡಿದ್ದಾಗಿ ಹೇಳಿಕೊಂಡು ಬ್ಯಾನರ್ ಹಾಕಿಕೊಂಡಿದ್ದಾರೆ. ಬಿಜೆಪಿಯವರು ಮಾಡಿದ ಕೆಲಸ ಏನು ಎಂಬುದು ಜನತೆಗೆ ಗೊತ್ತೇ ಇದೆ. ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ.
ಇನ್ನು, ಕಾಂಗ್ರೆಸ್ ಆರೋಪವನ್ನು ಅಲ್ಲಗಳೆದಿರುವ ಬಿಜೆಪಿ, ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಘೋಷಣೆಯಾಗಿದ್ದು ಕೇವಲ ಕಾಂಗ್ರೆಸ್‌ನಿಂದಲ್ಲ. ಧಾರವಾಡದ ಹಿರಿಯರು, ಸಾಹಿತಿಗಳು, ಪಕ್ಷಾತೀತ ನಾಯಕರ ಹೋರಾಟದಿಂದ ಪ್ರತ್ಯೇಕ ಪಾಲಿಕೆ ಘೋಷಣೆಯಾಗಿದೆ. ಕಾಂಗ್ರೆಸ್ ಕೇವಲ ಘೋಷಣೆಯನ್ನಷ್ಟೇ ಮಾಡಿದೆ. ಆದರೆ, ಪ್ರತ್ಯೇಕ ಪಾಲಿಕೆ ಹೋರಾಟಕ್ಕೆ ನಾಂದಿ ಹಾಡಿದ್ದೇ ನಾವು. ಬೊಮ್ಮಾಯಿ ಸಿಎಂ ಇದ್ದಾಗ ಫೈಲ್ ರೆಡಿಯಾಗಿತ್ತು. ಆದರೆ, ಚುನಾವಣೆ ಘೋಷಣೆಯಾಗಿದ್ದರಿಂದ ಆ ಕೆಲಸ ಕೈಗೂಡಲಿಲ್ಲ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದೆ.
ಏನೇ ಆಗಲಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ನಮ್ಮಿಂದ ಬಂತು... ನಮ್ಮಿಂದ ಬಂತು ಎಂದು ಅವರವರೇ ಬೆನ್ನು ತಟ್ಟಿಕೊಳ್ಳುತ್ತಿರುವಾಗ ಪ್ರತ್ಯೇಕ ಪಾಲಿಕೆ ಯಾರಿಂದ ಆಗಿದೆ ಎಂಬುದನ್ನು ಜನರು ಸೂಕ್ಷ್ಮವಾಗಿ ಅರಿತುಕೊಂಡಿದ್ದಾರೆ. ಒಟ್ಟಾರೆ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆಯಂತೂ ಘೋಷಣೆಯಾಗಿದ್ದು, ಅದನ್ನು ಎಲ್ಲರೂ ಸಂಭ್ರಮಿಸಬೇಕಿದೆಯಷ್ಟೇ.
Kshetra Samachara
08/01/2025 06:40 pm