ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ನೂತನ ಅಧ್ಯಕ್ಷರಾಗಿ ಡಾ.ವಿ.ನಾರಾಯಣನ್ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಇಸ್ರೋ ಅಧಿಕೃತ ಪ್ರಕಟಣೆ ಹೊರಡಿಸಿದೆ. ನಾರಾಯಣನ್ ಜ 14 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರು 2 ವರ್ಷ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
ಹಾಲಿ ಅಧ್ಯಕ್ಷ ಎಸ್.ಸೋಮನಾಥ್ ಅವರ ಅಧಿಕಾರಾವಧಿಯ ಕೊನೆಯ ದಿನವಾದ ಈ ತಿಂಗಳ 14ರಂದು ಅವರು ಅಧಿಕಾರ ಸ್ವೀಕರಿಸುವರು. ನಾರಾಯಣನ್ ಪ್ರಸ್ತುತ ವಲಿಯಮಾಲಾದಲ್ಲಿ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ ಸೆಂಟರ್ (ಎಲ್ ಪಿಎಸ್ ಸಿ)ಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಾಕೆಟ್ ಮತ್ತು ಬಾಹ್ಯಾಕಾಶ ನೌಕೆಯ ಪ್ರೊಪಲ್ಷನ್ ನಲ್ಲಿ ಸುಮಾರು ನಾಲ್ಕು ದಶಕಗಳ ಅನುಭವ ಹೊಂದಿದ್ದಾರೆ.
ಎಲ್ ಪಿಎಸ್ ಸಿ ನಿರ್ದೇಶಕರಾಗಿ ಅವರು ಭಾರತದ ಬಾಹ್ಯಾಕಾಶ ಯೋಜನೆಗೆ ಪ್ರಮುಖ ಸಾಧನ ಎನಿಸಿದ ಜಿಎಸ್ಎಲ್ವಿ ಎಂಕೆ 3ಗೆ ಸಿಇ20 ಕ್ರಯೋಜನಿಕ್ ಎಂಜಿನ್ ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ನಾಯಕತ್ವದಲ್ಲಿ ಎಲ್ಪಿಎಸ್ ಸಿ 183 ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಂ ಹಾಗೂ ಕಂಟ್ರೋಲ್ ಪವರ್ ಪ್ಲಾಂಟ್ ಗಳನ್ನು ವಿವಿಧ ಇಸ್ರೋ ಮಿಷನ್ ಗಳಿಗಾಗಿ ಅಭಿವೃದ್ಧಿಪಡಿಸಿತ್ತು.
PublicNext
08/01/2025 01:33 pm