ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ವಿಜೇತ ತಂಡ ಆಸ್ಟ್ರೇಲಿಯಾಕ್ಕೆ ಹಸ್ತಾಂತರಿಸುವಾಗ ಅಲನ್ ಬಾರ್ಡರ್ ಅವರೊಂದಿಗೆ ತಮ್ಮನ್ನು ಆಹ್ವಾನಿಸದೆ ಇರುವುದಕ್ಕೆ ಭಾರತದ ಮಾಜಿ ಕ್ರಿಕೆಟರ್ ಸುನಿಲ್ ಗವಾಸ್ಕರ್ ಅಸಮಾಧಾನ ಹೊರ ಹಾಕಿದ್ದರು. ಈ ಬೆನ್ನಲ್ಲೇ BGT ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಗವಾಸ್ಕರ್‌ರನ್ನು ಕೈಬಿಟ್ಟಿದ್ದು ಯಾಕೆ ಎಂಬ ಪ್ರಶ್ನೆ ಭಾರಿ ಸದ್ದು ಮಾಡಿತ್ತು. ಇದಕ್ಕೆ ಇದೀಗ ಕ್ರಿಕೆಟರ್ ಆಸ್ಟ್ರೇಲಿಯಾ ಸ್ಪಷ್ಟನೆ ನೀಡಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಆತಿಥೇಯ ತಂಡ 3-1 ಅಂತರದಿಂದ ಗೆದ್ದುಕೊಂಡಿತು. ಭಾರತ ಮತ್ತು ಆಸ್ಟ್ರೇಲಿಯಾ 1996-97 ರಿಂದ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಆಡುತ್ತಿವೆ. ಆಸ್ಟ್ರೇಲಿಯಾ 2015-16ರ ನಂತರ ಮೊದಲ ಬಾರಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಮರುಪಡೆಯಿತು.
"ಪ್ರವಾಸಿ ತಂಡ (ಭಾರತ)ವು ಟ್ರೋಫಿ ಗೆದ್ದರೆ, ಭಾರತೀಯ ನಾಯಕ ಜಸ್ಪ್ರೀತ್ ಬುಮ್ರಾ ಅವರಿಗೆ ಗವಾಸ್ಕರ್ ಪ್ರಶಸ್ತಿಯನ್ನು ನೀಡುವುದಾಗಿ ಅವರಿಗೆ ತಿಳಿಸಲಾಗಿತ್ತು. ಆದರೆ ಆಸ್ಟ್ರೇಲಿಯಾ 10 ವರ್ಷಗಳ ನಂತರ ಟ್ರೋಫಿಯನ್ನು ಗೆದ್ದುಕೊಂಡಿದೆ. ಆಸ್ಟ್ರೇಲಿಯನ್ ನಾಯಕ ಪ್ಯಾಟ್ ಕಮಿನ್ಸ್ ಅವರಿಗೆ ಟ್ರೋಫಿಯನ್ನು ನೀಡಲು ಅಲನ್ ಬಾರ್ಡರ್ ಅವರನ್ನು ಕರೆಯಲಾಯಿತು. ಆದರೆ ಅಲನ್ ಬಾರ್ಡರ್ ಮತ್ತು ಸುನಿಲ್ ಗವಾಸ್ಕರ್ ಇಬ್ಬರನ್ನೂ ವೇದಿಕೆಗೆ ಬರುವಂತೆ ಹೇಳಿದ್ದರೆ ಉತ್ತಮವಾಗಿರುತ್ತಿತ್ತು ಎಂದು ನಾವು ನಂಬುತ್ತೇವೆ" ಎಂದು ಇದೀಗ ಕ್ರಿಕೆಟ್ ಆಸ್ಟ್ರೇಲಿಯಾದ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
PublicNext
06/01/2025 10:56 pm