ಉಡುಪಿ: ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸದೇ ನಿರ್ಲಕ್ಷ್ಯ ತೋರಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ವಹಿಸಬೇಕು ಎಂದು ಅಭಿಯಂತರರಿಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ 169 ಎ ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಪ್ರಗತಿ ಪರಿಶೀಲನೆ ಕುರಿತು ಚರ್ಚಿಸುವ ಸಲುವಾಗಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಉಡುಪಿಯಿಂದ ಮಣಿಪಾಲ್‌ಗೆ ಹೋಗುವ ರಸ್ತೆ ಅಗಲೀಕರಣ ಕಾಮಗಾರಿಯ ಸಂದರ್ಭದಲ್ಲಿ ರೈಲ್ವೇ ಮೇಲ್ಸೇತುವೆ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ರೈಲ್ವೇ ಇಲಾಖೆಯ ಉಕ್ಕಿನ ಸೇತುವೆ ನಿರ್ಮಾಣ ಮಾಡಬೇಕೆಂದು ಸೂಚನೆ ನೀಡಿದ ಹಿನ್ನಲೆಯಲ್ಲಿ, 2018 ನೇ ಸಾಲಿನಲ್ಲಿ ಉಕ್ಕಿನ ಸೇತುವೆ ನಿರ್ಮಾಣ ಕಾಮಗಾರಿ ಪ್ರಕ್ರಿಯೆಯು ಪ್ರಾರಂಭವಾಗಿ, ಕಳೆದ 5 ವರ್ಷ ಕಳೆದರೂ ಪೂರ್ಣಗೊಳ್ಳದೇ ಸಾರ್ವಜನಿಕರ ಸಂಚಾರಕ್ಕೆ ಅವ್ಯವಸ್ಥೆ ಉಂಟಾಗಿ ಸಾರ್ವಜನಿಕರಿಂದ ದೂರುಗಳು ಪ್ರತಿದಿನವೂ ಕೇಳಿಬರುತ್ತಿವೆ. ಆದರೆ, ಗುತ್ತಿಗೆದಾರರು ನಿಗದಿತ ಕಾಲಾವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸದೇ ಇರುವುದು ಇದಕ್ಕೆಲ್ಲಾ ಕಾರಣ. ಪ್ರಮುಖ ಗುತ್ತಿಗೆದಾರ ಹಾಗೂ ಉಪ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಲು ಸಂಬಂಧಪಟ್ಟವರಿಗೆ ಪತ್ರ ಬರೆಯುವಂತೆ ಜಿಲ್ಲಾಧಿಕಾರಿ ಅಭಿಯಂತರರಿಗೆ ತಿಳಿಸಿದರು.
ಇಂದ್ರಾಳಿ ರೈಲ್ವೇ ಮೇಲ್ಸೇತುವೆ.
ಕಾಮಗಾರಿಯ ಕಳೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗುತ್ತಿಗೆದಾರರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಭಿಯಂತರುಗಳಿಗೆ ರಾತ್ರಿ ಹಾಗೂ ಹಗಲು ಎರಡೂ ಪಾಳಯದಲ್ಲಿ ಕಾರ್ಮಿಕರುಗಳನ್ನು ನಿಯೋಜಿಸಿ, ಕಾಮಗಾರಿಯನ್ನು ಶೀಘ್ರವಾಗಿ ಕೈಗೊಳ್ಳಲು ಸೂಚನೆ ನೀಡಲಾಗಿತ್ತು. ಆದರೆ, ಕೆಲವೇ ಮಂದಿ ಕಾರ್ಮಿಕರನ್ನು ನಿಯೋಜಿಸಿರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ಇವರು ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಆದ್ಯತೆಯ ಮೇಲೆ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು. ಉಕ್ಕಿನ ಸೇತುವೆಯ ನಿರ್ಮಾಣದ ವೆಲ್ಡಿಂಗ್ ಕೆಲಸವನ್ನು ನಿರ್ವಹಿಸಲು ಹೆಚ್ಚಿನ ಕಾರ್ಮಿಕರನ್ನು ನಿಯೋಜಿಸಬೇಕು. ಇದರ ಜೊತೆಯಲ್ಲಿಯೇ ಉಕ್ಕಿನ ಮೇಲ್ಸೇತುವೆಯ ಗರ್ಡರ್ ಗಳನ್ನು ಹಳಿಯ ಮೇಲ್ಭಾಗದಲ್ಲಿ ಇರಿಸಲು ಅಗತ್ಯವಿರುವ ಎಲ್ಲಾ ರೀತಿಯ ಪೂರಕ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು ಪ್ರಸ್ತುತ ಬಾಕಿ ಇರುವ ಕಾಮಗಾರಿಯನ್ನು ಮಾಡಲು ಯೋಜನೆಯನ್ನು ರೂಪಿಸಬೇಕು. ಇದಕ್ಕೆ ಅಗತ್ಯವಿರುವ ಎಲ್ಲಾ ಸಲಕರಣೆಗಳನ್ನು ನಿಯೋಜಿಸುವುದು ಸೇರಿದಂತೆ ಮತ್ತಿತರ ಪತ್ರ ವ್ಯವಹಾರವನ್ನು ಕೂಡಲೇ ಮಾಡಬೇಕು ಎಂದು ಸೂಚನೆ ನೀಡಿದರು.
.
Kshetra Samachara
06/01/2025 06:35 pm