ನವಲಗುಂದ: ರಾಜ್ಯ ಸರ್ಕಾರದ ಬಸ್ ಪ್ರಯಾಣ ದರ ಹೆಚ್ಚಳ ಅವೈಜ್ಞಾನಿಕವಾಗಿದ್ದು, ಒಂದು ಕಡೆ ಮಹಿಳೆಯರಿಗೆ ಉಚಿತ ಪ್ರಯಾಣ ಮತ್ತೊಂದು ಕಡೆ ಪುರುಷರಿಂದ ಹಗಲು ದರೋಡೆ ಮಾಡುತ್ತಿದೆ ಎಂದು ಉತ್ತರ ಕರ್ನಾಟಕ ಪರಿವರ್ತನ ಸಮುದಾಯದ ಅಧ್ಯಕ್ಷ ಮಾಬುಸಾಬ ಯರಗುಪ್ಪಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯಿಂದ ತಹಶೀಲ್ದಾರ ಸುಧೀರ ಸಾಹುಕಾರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಸಾರಿಗೆ ಸಚಿವರಿಗೆ ಮನವಿ ನೀಡಿ ಮಾತನಾಡಿದ ಅವರು ಗ್ಯಾರಂಟಿ ಯೋಜನೆಯ ಮೂಲಕ ಉಚಿತ ಕೊಡುವ ಸರ್ಕಾರ, ಅದೇ ಮನೆಯ ಪುರುಷರ ಜೇಬಿಗೆ ಕತ್ತರಿ ಹಾಕುತ್ತಿದೆ. ಮಹಿಳೆಯರ ಬಗ್ಗೆ ನಮಗೆ ಗೌರವ ಇದೆ ಅವರಿಗೆ ಶಕ್ತಿ ಯೋಜನೆ ನೀಡಿದ್ದು ಸಂತೋಷ, ಆದರೆ ಪುರುಷರನ್ನು ಕಡೆಗಣಿಸಿದ್ದು ಸರಿಯಲ್ಲ ಈ ಕೂಡಲೇ ಬಸ್ ಪ್ರಯಾಣ ದರ ಹೆಚ್ಚಳ ಕೈ ಬಿಡಬೇಕೆಂದು ಮನವಿಯಲ್ಲಿ ಆಗ್ರಹ ಮಾಡಿದರು.
ರಿಯಾಜ ಅಹ್ಮದ ನಾಶಿಪುಡಿ ಮಾತನಾಡಿ ಸರ್ಕಾರ ಬಸ್ ಪ್ರಯಾಣ ದರ ಹೆಚ್ಚಿಸುವುದರ ಮೂಲಕ ಸಾರ್ವಜನಿಕರಿಂದ ಹಗಲು ದರೋಡೆಗೆ ನಿಂತಿದೆ. ನಾವು ನೀಡಿದ ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ಸುಧಾರಣೆಯಾಗಿದೆ ಎಂದು ಹೇಳುವ ಸರ್ಕಾರ ಅದೇ ಜನರ ಜೇಬಿನಿಂದಲೇ ಬೆಲೆ ಏರಿಕೆಯ ನೆಪದ ಮೂಲಕ ಹಣ ಸಂಗ್ರಹಕ್ಕೆ ನಿಂತಿದ್ದು ಬೇಸರವಾಗಿದೆ, ಪುರುಷರಿಗೂ ಕೂಡಾ ಉಚಿತ ಬಸ್ ಪ್ರಯಾಣವನ್ನು ಆರಂಭಿಸಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ನರಸಪ್ಪನವರ, ಶರೀಪ ಹುಡೇದ, ಬುಡ್ನಾಸಾಬ ನಾಶಿಪುಡಿ ಉಪಸ್ಥಿತರಿದ್ದರು.
Kshetra Samachara
06/01/2025 04:48 pm