ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯ ದಾಖಲೆಗಳನ್ನು ಸೂಕ್ಷ್ಮವಾಗಿ ಗಣಕೀಕರಣಗೊಳಿಸಲು ಜಿಲ್ಲಾಧಿಕಾರಿ ಶುಭಕಲ್ಯಾಣ್ ಕರೆ ....

ತುಮಕೂರು : ಜಿಲ್ಲೆಯ ಎಲ್ಲಾ ತಾಲ್ಲೂಕು ಕಚೇರಿ ಅಭಿಲೇಖಾಲಯದಲ್ಲಿರುವ ಹಳೆಯ ದಾಖಲೆಗಳನ್ನು ಸೂಕ್ಷ್ಮವಾಗಿ ಗಣಕೀಕರಣಗೊಳಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕಂಪ್ಯೂಟರ್ ಆಪರೇಟರ್‌ಗಳಿಗೆ ಕರೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಕಂಪ್ಯೂಟರ್ ಆಪರೇಟರ್‌ಗಳಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದ ಅವರು, ಕಂದಾಯ ಇಲಾಖೆಯು ಭೂಸುರಕ್ಷಾ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಹೊಸ ತಂತ್ರಾಂಶದಡಿ ಜಿಲ್ಲೆಯ ಎಲ್ಲಾ ತಾಲ್ಲೂಕು ಕಚೇರಿಯ ಅಭಿಲೇಖಾಲಯದಲ್ಲಿರುವ ಕಂದಾಯ ದಾಖಲೆಗಳನ್ನು ಗಣಕೀಕರಣಗೊಳಿಸುವ ಉದ್ದೇಶದಿಂದ ಕಂಪ್ಯೂಟರ್ ಆಪರೇಟರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.

ಈ ತರಬೇತಿಯಲ್ಲಿ ನೀಡಿದ ಸಲಹೆ ಸೂಚನೆಗಳನ್ವಯ ಆಪರೇಟರ್‌ಗಳು ಕಂದಾಯ ದಾಖಲೆಗಳನ್ನು ಗಣಕೀಕರಣಗೊಳಿಸಬೇಕು. ದಾಖಲೆಗಳನ್ನು ಸ್ಕ್ಯಾನ್ ಮಾಡಿ ತಂತ್ರಾಂಶಕ್ಕೆ ಅಪ್‌ಲೋಡ್ ಮಾಡಬೇಕು ಎಂದು ತಿಳಿಸಿದರು.

ಮೊದಲಿಗೆ ಎ ವರ್ಗದ ಕಡತ/ ವಹಿಗಳ ಗಣಕೀಕರಣ ಮಾಡಬೇಕು. ನಂತರದಲ್ಲಿ ಬಿ ವರ್ಗದ ಕಡತ/ವಹಿಗಳನ್ನು ಗಣಕೀಕರಣ ಮಾಡಬೇಕು. ಅಭಿಲೇಖಾಲಯದಲ್ಲಿ ಸುಮಾರು 150 ವರ್ಷಕ್ಕೂ ಹಳೆಯದಾದ ದಾಖಲೆಗಳಿರುತ್ತವೆ. ಇಂತಹ ದಾಖಲೆಗಳನ್ನು ಸಂರಕ್ಷಿಸಲು ಈ ಗಣಕೀಕರಣ ಕಾರ್ಯ ಕೈಗೊಳ್ಳಲಾಗಿದೆ.

ಕಂಪ್ಯೂಟರ್ ಆಪರೇಟರ್‌ಗಳು ಹಳೆಯ ದಾಖಲೆಗಳನ್ನು ಸ್ಕ್ಯಾನ್ ಮಾಡುವಾಗ ದಾಖಲೆಗಳು ಹಾಳಾಗದಂತೆ ಬಹುಸೂಕ್ಷ್ಮವಾಗಿ ಕಾರ್ಯನಿರ್ವಹಿಸಬೇಕು. ಗಣಕೀಕರಣ ಕಾರ್ಯದಲ್ಲಿ ಯಾವುದೇ ಸಂದೇಹ-ಸಮಸ್ಯೆ ಎದುರಾದಲ್ಲಿ ಸಂಬಂಧಿಸಿದ ತಹಶೀಲ್ದಾರರಿಗೆ ಮಾಹಿತಿ ನೀಡಿ ಪರಿಹರಿಸಿಕೊಳ್ಳಬೇಕು. ಅಭಿಲೇಖಾಲಯದಲ್ಲಿ ಇರುವ ದಾಖಲೆಗಳ ಬಗ್ಗೆ ಹೊರಗಿನವರಿಗೆ ಯಾವುದೇ ಮಾಹಿತಿ ನೀಡಬಾರದು. ಗಣಕೀಕರಣ ಕಾರ್ಯ ನಿರ್ವಹಿಸುವ ಸ್ಥಳದಲ್ಲಿ ಮೊಬೈಲ್‌ಗಳಿಗೆ ಪ್ರವೇಶವಿರುವುದಿಲ್ಲ ಎಂದು ತಿಳಿಸಿದರು.

ಕಂದಾಯ ಇಲಾಖೆಯ ಭೂ ಸುರಕ್ಷಾ ಯೋಜನೆಯಡಿ ಕೈಗೊಂಡಿರುವ ದಾಖಲೆಗಳ ಗಣಕೀಕರಣ ಕಾರ್ಯವನ್ನು ನಂಬಿಕೆಗೆ ಅರ್ಹವಾಗಿ ಉತ್ತಮವಾಗಿ ನಿರ್ವಹಿಸಬೇಕು ಎಂದು ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಎನ್.ತಿಪ್ಪೇಸ್ವಾಮಿ, ಜಿಲ್ಲೆಯ ವಿವಿಧ ತಹಶೀಲ್ದಾರರು, ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಮೋಹನ್ ಕುಮಾರ್, ಸೇರಿದಂತೆ ಮತ್ತಿತರರು ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

05/01/2025 10:45 am

Cinque Terre

1.38 K

Cinque Terre

0

ಸಂಬಂಧಿತ ಸುದ್ದಿ