ನಾಪೋಕ್ಲು: ಬಲ್ಲಮಾವಟ್ಟಿ ಗ್ರಾಮ ಪಂಚಾಯಿತಿಯ ದೊಡ್ಡಪುಲಿಕೋಟು ಗ್ರಾಮದಲ್ಲಿ ರೆಸಾರ್ಟ್ ನಿರ್ಮಾಣವಾದಲ್ಲಿ ಗ್ರಾಮದ ನೆಲ,ಜಲ,ಪರಿಸರ,ಜನಜೀವನಕ್ಕೆ ತೀವ್ರ ಧಕ್ಕೆಯಾಗಲಿದೆ.
ಗ್ರಾಮದ ಮುನ್ನೂರು ಕುಟುಂಬಗಳೂ ಒಟ್ಟಾಗಿ ರೆಸಾರ್ಟ್ ನಿರ್ಮಾಣವನ್ನು ವಿರೋಧಿಸುತ್ತೇವೆ ಎಂದು ದೊಡ್ಡಪುಲಿಕೋಟು ಗ್ರಾಮ ಹಿತ ರಕ್ಷಣಾ ಸಮಿತಿ ಸಂಚಾಲಕರಾದ ಕರವಂಡ ಲವ ನಾಣಯ್ಯ ಹೇಳಿದರು. ಗ್ರಾಮದಲ್ಲಿ ಕರೆಯಲಾಗಿದ್ದ ಗ್ರಾಮಸ್ಥರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ರೆಸಾರ್ಟಿನ ಮಾಲೀಕ ಅಂಟೋನಿ ತೋಮಸ್ ಕೂನನ್ ಮಾತನಾಡಿ ಗ್ರಾಮಕ್ಕೆ ಹಾಗೂ ಗ್ರಾಮದ ಜನರ ಕುಡಿಯುವ ನೀರಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಟೆಂಟ್ ಹೌಸ್ ಗಳನ್ನು ನಿರ್ಮಿಸುತ್ತೇವೆ. ಇದರಿಂದ ಗ್ರಾಮಕ್ಕೆ ಯಾವುದೇ ತೊಂದರೆಯಾಗುವುದಿಲ್ಲ.ಇದಕ್ಕೆ ದಯವಿಟ್ಟು ಗ್ರಾಮಸ್ಥರು ಅನುಮತಿಯನ್ನು ನೀಡಬೇಕು ಎಂದು ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರು.
ಗ್ರಾಮಸ್ಥರ ವಿರೋಧದ ನಡುವೆಯೂ ರೆಸಾರ್ಟ್ ನಿರ್ಮಾಣಕ್ಕೆ ಯತ್ನಿಸಿದರೆ ಮುಂದೆ ಆಗುವಂತಹ ಅನಾಹುತಗಳಿಗೆ ತಾವು ಹಾಗೂ ಇದಕ್ಕೆ ಸಹಕಾರ ನೀಡಿದಂತಹ ವ್ಯಕ್ತಿಗಳೇ ನೇರ ಹೊಣೆಗಾರರಾಗುತ್ತಾರೆ ಎಂದು ಗ್ರಾಮಸ್ಥರು ಎಚ್ಚರಿಕೆಯನ್ನು ನೀಡಿದರು. ಯಾವುದೇ ಕಾರಣಕ್ಕೂ ಹೊರಗಿನ ವ್ಯಕ್ತಿಗಳಿಗೆ ತಮ್ಮ ಆಸ್ತಿಪಾಸ್ತಿಯನ್ನು ಮಾರಾಟ ಮಾಡಬಾರದು. ಈ ತರಹದ ರೆಸಾರ್ಟ್ ಅಥವಾ ಗ್ರಾಮಕ್ಕೆ ಮಾರಕವಾಗುವಂತಹ ಯೋಜನೆಗಳು ಜಿಲ್ಲೆಯಲ್ಲಿ ಕಂಡು ಬಂದರೆ ಗ್ರಾಮಸ್ಥರು ಎಲ್ಲರೂ ಸೇರಿ ಒಗ್ಗಟ್ಟಿನಿಂದ ಹೋರಾಡಿ ಅದನ್ನು ದಮನಗೊಳಿಸಲು ಪ್ರಯತ್ನಿಸಿಬೇಕು ಎಂಬ ನಿರ್ಣಯವನ್ನು ಗ್ರಾಮಸ್ಥರ ಸಭೆಯಲ್ಲಿ ಕೈಗೊಳ್ಳಲಾಯಿತು.
Kshetra Samachara
04/01/2025 06:21 pm