ಮಡಿಕೇರಿ: ಕಟ್ಟೆಮಾಡುವಿನ ಎಲ್ಲಾ ಜನಾಂಗ ಬಾಂಧವರು ಒಟ್ಟಾಗಿ ಶ್ರೀ ಮಹಾ ಮೃತ್ಯುಂಜಯ ದೇವಸ್ಥಾನದ ಅಭಿವೃದ್ಧಿಗಾಗಿ ಶ್ರಮಿಸಿದ್ದು, ಮೃತ್ಯುಂಜಯನ ಸನ್ನಿಧಿಯಲ್ಲಿ ಭಕ್ತಿ ಇರಲಿ, ಶಕ್ತಿ ಪ್ರದರ್ಶನ ಬೇಡ ಎಂದು ಗ್ರಾಮದ ಬಿಲ್ಲವ ಸೇವಾ ಸಮಾಜ ಮನವಿ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಸದಸ್ಯ ರಘು ರಾಜಕುಮಾರ್ ಶ್ರೀ ಮಹಾ ಮೃತ್ಯುಂಜಯ ದೇವಸ್ಥಾನದ ಜಾತ್ರೋತ್ಸವದ ಸಂದರ್ಭ ನಡೆದ ಘಟನೆ ಅತೀವ ಬೇಸರವನ್ನುಂಟು ಮಾಡಿದೆ. ದೇವರು ಜಳಕಕ್ಕೆ ತೆರಳುವ ಪರಂಬು ಪೈಸಾರಿಯ ಉದ್ದಕ್ಕೂ ಅಲ್ಲಿನ ನಿವಾಸಿಗಳು ಹಾದಿಯನ್ನು ಸ್ವಚ್ಛಗೊಳಿಸಿ ಹೂವಿನ ರಂಗೋಲಿಯನ್ನಿಟ್ಟು, ಭಕ್ತಾದಿಗಳಿಗೆ ಆಹಾರ ವ್ಯವಸ್ಥೆಯನ್ನು ಮಾಡಿ ದೇವರ ಆಗಮನವನ್ನು ಎದುರು ನೋಡುತ್ತಿದ್ದರು. ಆದರೆ ಇದೇ ಅವಧಿಯಲ್ಲಿ ಭಿನ್ನಾಭಿಪ್ರಾಯ ಮೂಡಿತು ಎಂದರು.
ಶ್ರೀ ಮಹಾ ಮೃತ್ಯಂಜಯ ದೇವಸ್ಥಾನ ಸಮಿತಿಯಲ್ಲಿ ಗ್ರಾಮದ ಎಲ್ಲಾ ಜನಾಂಗದ ಪ್ರತಿನಿಧಿಗಳು ಸೇರಿದಂತೆ ಒಟ್ಟು 43 ಸದಸ್ಯರುಗಳಿದ್ದಾರೆ. ಇವರೆಲ್ಲರ ಒಮ್ಮತದ ತೀರ್ಮಾನದಂತೆ ಅಧ್ಯಕ್ಷರನ್ನಾಗಿ ಗೌಡ ಸಮುದಾಯದ ಒಬ್ಬರನ್ನು ಆಯ್ಕೆ ಮಾಡಲಾಗಿದೆ. ದೇವಸ್ಥಾನದ ಪ್ರತಿಯೊಂದು ಕೆಲಸ ಕಾರ್ಯಗಳನ್ನು ಎಲ್ಲಾ ಜನಾಂಗ ಬಾಂಧವರು ಒಟ್ಟಾಗಿ ಮಾಡಿಕೊಂಡು ಬರುತ್ತಿದ್ದೇವೆ. ದೇವರ ಸ್ಥಾನದಲ್ಲಿ ಎಲ್ಲರೂ ಸಮಾನರು ಎನ್ನುವ ಕಾರಣಕ್ಕೆ ಪಂಚೆ ಮತ್ತು ಶರ್ಟ್ ಧರಿಸಬೇಕೆಂದು ನಿಯಮ ಮಾಡಿಕೊಳ್ಳಲಾಗಿದೆ. ಇದಕ್ಕೆ ಗ್ರಾಮದ ಎಲ್ಲಾ ಜನಾಂಗದವರು ಒಪ್ಪಿಗೆ ಸೂಚಿಸಿ ಅದರಂತೆ ನಡೆದುಕೊಳ್ಳುತ್ತಿದ್ದಾರೆ.
ಉತ್ಸವದ ಸಂದರ್ಭ ನಡೆದ ಅಹಿತಕರ ಘಟನೆ ಮತ್ತೆ ಮರುಕಳಿಸುವುದು ಬೇಡ, ಜನಾಂಗ ಜನಾಂಗಗಳ ನಡುವೆ ಒಡಕು ಮೂಡುವುದು ಸರಿಯಲ್ಲ. ಎಲ್ಲರೂ ಒಗ್ಗಟ್ಟಿನಿಂದ ಶ್ರೀ ಮಹಾ ಮೃತ್ಯುಂಜಯನ ಸೇವೆ ಮಾಡಬೇಕಾಗಿದೆ ಎಂದು ರಘು ರಾಜಕುಮಾರ್ ತಿಳಿಸಿದರು
Kshetra Samachara
04/01/2025 03:47 pm