ಬೆಂಗಳೂರು: ಪ್ರೀತಿಸಿದ ಯುವತಿ ದೂರಾಗಿದ್ದಕ್ಕೆ ಮನನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸತೀಶ್ ಕುಮಾರ್ (25) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಘಟನೆಯ ಕುರಿತು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ವರದಿಯಾಗಿದೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸತೀಶ್ ಕಾಲೇಜು ದಿನಗಳಿಂದಲೂ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದ. ಇಬ್ಬರ ಪ್ರೀತಿಗೆ ಸಮ್ಮತಿಸದ ಯುವತಿಯ ಮನೆಯವರು ಸತೀಶ್ ಕುಮಾರ್ ವಿರುದ್ಧ 4 ತಿಂಗಳುಗಳ ಹಿಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದಾದ ಬಳಿಕ ಇಬ್ಬರೂ ಪರಸ್ಪರ ಅಂತರ ಕಾಪಾಡಿಕೊಂಡಿದ್ದರು. ಆದರೆ ಹೊಸ ವರ್ಷದ ಸಂದರ್ಭದಲ್ಲಿ ಯುವತಿಗೆ ಕರೆ ಮಾಡಿದ್ದ ಸತೀಶ್ ಕುಮಾರ್, ಇಬ್ಬರೂ ಈ ವರ್ಷದಿಂದ ಒಂದಾಗಿ ಖುಷಿಯಾಗಿರೋಣ ಎಂದು ಮನವಿ ಮಾಡಿಕೊಂಡಿದ್ದ. ಆದರೆ ಮನವಿಯನ್ನ ಯುವತಿ ತಿರಸ್ಕರಿಸಿದ್ದಳು. ಇದರಿಂದ ಸಾಕಷ್ಟು ನೊಂದಿದ್ದ ಸತೀಶ್ ಕುಮಾರ್ ಗುರುವಾರ ರಾತ್ರಿ ಮನೆಯಲ್ಲಿ ತನ್ನ ರೂಮ್‌ನ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಡಾ.ಬಿ.ಆರ್ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಘಟನೆಯ ಕುರಿತು ಬಾಣಸವಾಡಿ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
PublicNext
04/01/2025 08:05 am