ಮಂಗಳೂರು: ರಾಜ್ಯದ ಮುಖ್ಯಮಂತ್ರಿ ಸೇರಿ ಅನೇಕ ಸಚಿವರ ವಿರುದ್ಧ ಅನೇಕ ತೀವ್ರ ಆರೋಪಗಳಿವೆ. ಹತ್ಯೆ ಹಾಗೂ ಆತ್ಮಹತ್ಯೆಯೇ ರಾಜ್ಯದ ಕಾಂಗ್ರೆಸ್ ಸರಕಾರದ ಹೆಗ್ಗುರುತಾಗಿದೆ. ಕಟಾಕಟ್ ಹೇಳಿದವರು ಕಟಾಕಟ್ ಆಗಿ ಹಣವನ್ನು ಹೇಗೆ ನುಂಗಿಕೊಳ್ಳುವುದು ಎಂದು ಕರ್ನಾಟಕದಲ್ಲಿ ತೋರಿಸಿಕೊಟ್ಟಿದ್ದಾರೆ. ಇದರ ವಿರುದ್ಧ ಹೋರಾಟವನ್ನು ಬಿಜೆಪಿ ಖಂಡಿತಾ ಮಾಡಲಿದೆ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಚಾಟಿ ಬೀಸಿದರು.
ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಪ್ರಿಯಾಂಕ್ ಖರ್ಗೆಯವರಷ್ಟು ದುರಹಂಕಾರದಿಂದ ವರ್ತಿಸಿರಲಿಲ್ಲ. ಆದರೆ, ಪ್ರಿಯಾಂಕ್ ಖರ್ಗೆಗೆ ಈಗಾಗಲೇ ದುರಹಂಕಾರ ತಲೆಗೇರಿದೆ. ಅವರ ದುರಹಂಕಾರದ ವರ್ತನೆಗೆ ಜನರು ಸೂಕ್ತ ಉತ್ತರ ಕೊಡಲಿದ್ದಾರೆ. ಅವರ ದುರ್ವರ್ತನೆಯ ಕಾರಣದಿಂದಲೇ ಮಲ್ಲಿಕಾರ್ಜುನ ಖರ್ಗೆಯವರು 2019ರಲ್ಲಿ ಸೋತಿರುವುದನ್ನು ಅವರು ನೆನಪಿಟ್ಟುಕೊಳ್ಳಲಿ.
ಪ್ರಿಯಾಂಕ್ ಖರ್ಗೆ ಸಾರ್ವಜನಿಕ ಬದುಕಿನ ಎಲ್ಲಾ ಮಟ್ಟವನ್ನು ಮೀರಿದವರು. ಅವರು ಎಷ್ಟು ಕೆಳಗಿಳಿಯಲು ಬೇಕಾದರೂ ಸಿದ್ಧರಿದ್ದಾರೆ. ಆದ್ದರಿಂದ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡುತ್ತಾರೆ ಎಂಬ ನಿರೀಕ್ಷೆ ನಮಗಿಲ್ಲ. ಆದ್ದರಿಂದ ಜನರನ್ನು ಜಾಗೃತಿ ಮಾಡಲು ನಾವು ಹೋರಾಟ ಮುಂದುವರೆಸುತ್ತೇವೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಆಗುತ್ತದೆ ಎಂಬುದರ ಬಗ್ಗೆ ನಾನು ಹೇಳಲ್ಲ. ಆದರೆ, ದೇಶಾದ್ಯಂತ ಪ್ರತೀ ಮಂಡಲ, ಬೂತ್, ಜಿಲ್ಲಾಧ್ಯಕ್ಷ, ರಾಜ್ಯಾಧ್ಯಕ್ಷ, ರಾಷ್ಟ್ರಾಧ್ಯಕ್ಷ ಬದಲಾವಣೆಗೆ ಪ್ರೋಸೆಸ್ ನಡೆಯುತ್ತಿದೆ. ಅದರಲ್ಲಿ ಇದ್ದವರೇ ಮತ್ತೊಮ್ಮೆ ಆಯ್ಕೆ ಆಗಬಹುದು. ನಾಲ್ಕೈದು ತಿಂಗಳ ಹಿಂದೆ ಕೆಲವು ಕಡೆಗಳಲ್ಲಿ ರಾಜ್ಯಾಧ್ಯಕ್ಷರ ಆಯ್ಕೆ ನಡೆದಿದೆ. ಸದ್ಯ ಬೂತ್ ಅಧ್ಯಕ್ಷರ ಚುನಾವಣೆ ಆಗಿದೆ, ಇನ್ನು ಮಂಡಲಾಧ್ಯಕ್ಷರ ಚುನಾವಣೆ ಆಗಲಿದೆ ಎಂದು ಪ್ರಲ್ಹಾದ ಜೋಶಿ ಹೇಳಿದರು.
PublicNext
02/01/2025 07:57 pm