ಚಿಕ್ಕಮಗಳೂರು: ಡಿಸೆಂಬರ್ 19ರಂದು ಬೆಳಗಾವಿಯ ಸುವರ್ಣಸೌಧದಲ್ಲಿ ಸಿ.ಟಿ.ರವಿ ಮೇಲಿನ ಹಲ್ಲೆ ಯತ್ನ ಹಾಗೂ ಬಂಧನವನ್ನ ಖಂಡಿಸಿ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡಸಿದ್ದ 30ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ.
ಡಿಸೆಂಬರ್ 19ರಂದು ರಾಷ್ಟ್ರೀಯ ಹೆದ್ದಾರಿ 173ನ್ನ ತಡೆದು ಪ್ರತಿಭಟನೆ ನಡೆಸಿದ್ದರು. 20ರಂದು ಚಿಕ್ಕಮಗಳೂರು ನಗರ ಬಂದ್‍ಗೆ ಕರೆ ನೀಡಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ನಗರದಲ್ಲಿ ಅಲ್ಲಲ್ಲೇ ಬೈಕ್-ಟೈರ್‍ಗಳಿಗೆ ಬೆಂಕಿ ಹಾಕಲಾಗಿತ್ತು, ಗಲಾಟೆ ಕೂಡ ನಡೆದಿತ್ತು. ಅಂದು ಪೊಲೀಸರು ಸುಮಾರು 100ಕ್ಕೂ ಹೆಚ್ಚು ಜನರನ್ನ ಬಂಧಿಸಿ, ಚಿಕ್ಕಮಗಳೂರು ನಗರದಿಂದ ಸುಮಾರು 80 ಕಿ.ಮೀ. ದೂರದ ಕಡೂರು ತಾಲೂಕಿನ ಸಿಂಗಟಗೆರೆ ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿ ಬಿಡುಗಡೆ ಮಾಡಿದ್ದರು. ಅವರಲ್ಲಿ ಇಂದು ತರೀಕೆರೆ ಪೊಲೀಸರು 30ಕ್ಕೂ ಹೆಚ್ಚು ಜನರಿಗೆ ನೋಟೀಸ್ ನೀಡಿದ್ದಾರೆ. 100ರಲ್ಲಿ ಹೆಸರು ಗೊತ್ತಿರುವಂತಹಾ 30ಕ್ಕೂ ಹೆಚ್ಚು ಜನರಿಗೆ ನೋಟೀಸ್ ನೀಡಿ ಜನವರಿ 4ರಂದು ತರೀಕೆರೆ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ.
ಆದರೆ, ಬಿಜೆಪಿ ಕಾರ್ಯಕರ್ತರು ಪೊಲೀಸರ ನೋಟೀಸ್ ವಿರುದ್ಧ ಕಿಡಿಕಾರಿದ್ದು ಅಸಮಾಧಾನ ಹೊರಹಾಕಿದ್ದಾರೆ. ಪ್ರತಿಭಟನೆ ಮಾಡಿದ್ದು, ಬಂಧನ ಮಾಡಿದ್ದು, ಪ್ರಕರಣ ದಾಖಲಾಗಿದ್ದು ಎಲ್ಲಾ ಚಿಕ್ಕಮಗಳೂರು ನಗರ ಠಾಣೆಯಲ್ಲಿ. ಆದರೆ, ವಿಚಾರಣೆ ತರೀಕೆರೆಯಲ್ಲಿ ಏಕೆ. ಇನ್ವೆಸ್ಟಿಗೇಷನ್ ಆಫೀಸರ್ ಕೂಡ ತರೀಕೆರೆಯವರೇ ಏಕೆ ಎಂದು ಬಿಜೆಪಿ ಕಾರ್ಯಕರ್ತರು ಪೊಲೀಸರ ವಿರುದ್ಧ ಕಿಡಿಕಾರಿದ್ದು, ಸರ್ಕಾರ ಹಾಗೂ ಪೊಲೀಸರು ಹೋರಾಟಗಾರರನ್ನ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
PublicNext
02/01/2025 07:37 pm