ಶಿಮ್ಲಾ : ವಿಧಾನಸಭೆ ಎಲೆಕ್ಷನ್ ಸಂದರ್ಭದಲ್ಲಿ ನೀಡಿದ್ದ ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ಬಳಿಕ ಆರ್ಥಿಕ ಸಂಕಷ್ಟ ಎದುರಾದ ಹಿನ್ನೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇದೀಗ ಗ್ಯಾರೆಂಟಿಗಳನ್ನು ವಾಪಸ್ ಪಡೆಯಲು ಮುಂದಾಗಿದೆ.
ಸದ್ಯ ವಿದ್ಯುತ್ ಸಬ್ಸಿಡಿ ಕೈಬಿಡಲಾಗಿದೆ. ಜನರಿಗೂ ಯೋಜನೆಗಳನ್ನು ತ್ಯಜಿಸಲು ಮನವಿ ಮಾಡಲಾಗಿದೆ. ಮುಖ್ಯಮಂತ್ರಿ ಸುಕ್ ವಿಂದ್ ಸಿಂಗ್ ಸುಖು ತಮ್ಮ ಹೆಸರಲ್ಲಿ ನೋಂದಣಿಯಾಗಿದ್ದ ವಿದ್ಯುತ್ ಸಬ್ಸಿಡಿಯನ್ನು ವಾಪಸ್ ನೀಡಿದ್ದು, ಇತರೆ ಅನುಕೂಲಸ್ಥರಿಗೂ ಸಬ್ಸಿಡಿ ಯೋಜನೆಯಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದಾರೆ.
ಇದರೊಂದಿಗೆ ವಿದ್ಯುತ್ ಸಬ್ಸಿಡಿ ವಾಪಸ್ ಅಭಿಯಾನ ಆರಂಭವಾಗಿದ್ದು, ತಮ್ಮ ಹೆಸರಲ್ಲಿ ನೋಂದಣಿಯಾಗಿದ್ದ ಐದು ಸಂಪರ್ಕಗಳಿಗೆ ಸಿಗುತ್ತಿದ್ದ ವಿದ್ಯುತ್ ಸಬ್ಸಿಡಿಯನ್ನು ಸುಖು ಹಿಂತಿರುಗಿಸಿದ್ದಾರೆ. ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಸಬ್ಸಿಡಿ ವಾಪಸ್ ನೀಡುವಂತೆ ಜನತೆಗೆ ಮನವಿ ಮಾಡಿದ್ದಾರೆ.
ಸರ್ಕಾರ ವಿದ್ಯುತ್ ಸಬ್ಸಿಡಿಗೆ ವಾರ್ಷಿಕ 2200 ಕೋಟಿ ರೂ. ಖರ್ಚು ಮಾಡುತ್ತಿದೆ. ಇಂಧನ ಇಲಾಖೆ ನೌಕರರ ವೇತನ, ಪಿಂಚಣಿಗೆ ತಿಂಗಳಿಗೆ 200 ಕೋಟಿ ರೂ. ವೆಚ್ಚವಾಗುತ್ತದೆ. ಉಳ್ಳವರು ಸಬ್ಸಿಡಿ ವಾಪಸ್ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಆರ್ಥಿಕ ಸಂಕಷ್ಟದಲ್ಲಿರುವ ಹಿಮಾಚಲ ಪ್ರದೇಶ ಸರ್ಕಾರ ಪರಿಸ್ಥಿತಿ ನಿಭಾಯಿಸಲು ಹೆಣಗಾಡುತ್ತಿದ್ದು, ಅನೇಕ ವೆಚ್ಚಗಳಿಗೆ ಕಡಿವಾಣ ಹಾಕಿದೆ.
PublicNext
02/01/2025 03:27 pm