ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಶವಗಳ ಕೊರತೆ

ಧಾರವಾಡ: ವೈದ್ಯಕೀಯ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಪ್ರಮುಖವಾಗಿ ಬೇಕಾಗಿರುವುದು ಶವಗಳು. ಈ ಶವಗಳ ಮುಖಾಂತರ ಮಾನವ ಅಂಗರಚನೆ ಬಗ್ಗೆ ವೈದ್ಯಕೀಯ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ. ಆದರೆ, ಇತ್ತೀಚೆಗೆ ವಿದ್ಯಾರ್ಥಿಗಳ ಅಧ್ಯಯನಕ್ಕೆ ಶವಗಳ ಕೊರತೆ ಕಂಡು ಬರುತ್ತಿದೆ.

ಮಾನವ ಅಂಗರಚನಾಶಾಸ್ತ್ರ ಮತ್ತು ಶಸ್ತ್ರಚಿಕಿತ್ಸಾ ತಂತ್ರಗಳ ಪ್ರಾಯೋಗಿಕ ಕಲಿಕೆಗೆ ಮೆಡಿಕಲ್ ಕಾಲೇಜುಗಳಲ್ಲಿ ಮೃತದೇಹಗಳ ಕೊರತೆ ಕಾಣಿಸಿಕೊಂಡಿದೆ. ಇದು ರಾಜ್ಯದ ವೈದ್ಯಕೀಯ ವಿದ್ಯಾರ್ಥಿಗಳ ಪ್ರಥಮ ವರ್ಷದ ಅಧ್ಯಯನ, ವಿಜ್ಞಾನ ಪ್ರಗತಿ, ಸಂಶೋಧನೆಗೆ ಭಾರಿ ಹಿನ್ನಡೆ ಆಗಿದೆ.

ಎಂಬಿಬಿಎಸ್, ಬಿಎಎಂಎಸ್, ಬಿಎಚ್‌ಎಂಎಸ್ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾನವ ಶರೀರ ರಚನೆ ಮೊದಲ ವರ್ಷದ ಅಧ್ಯಯನ ವಿಷಯವಾಗಿದೆ. ಇಲ್ಲಿ ಅವರು ಪ್ರಾಯೋಗಿಕ ವಿದ್ಯಾರ್ಜನೆ ಪಡೆದ ನಂತರವೇ ಮುಂದಿನ ತರಗತಿಗೆ ಹೋಗಬೇಕು. ಈ ವೇಳೆ ಮೃತದೇಹವನ್ನು ಛೇದನ ಮಾಡಿ ಮಾನವನ ಅಂಗರಚನೆಯ ಬಗ್ಗೆ ಪಾಠ ನೀಡಲಾಗುತ್ತದೆ. ಶಸ್ತ್ರಚಿಕಿತ್ಸಾ ತಂತ್ರಗಳನ್ನೂ ಕಲಿಸಲಾಗುತ್ತದೆ. ಇದಕ್ಕಾಗಿ 10 ವಿದ್ಯಾರ್ಥಿಗಳಿಗೆ ಒಂದು ಮೃತದೇಹ ಬೇಕು ಎಂಬುದು ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್.ಎಂ.ಸಿ) ನಿಯಮ. ಆದರೆ, ಮೃತದೇಹಗಳ ಕೊರತೆ ಸಾವಿರಾರು ಉತ್ತಮ ವೈದ್ಯರನ್ನು ಸಜ್ಜುಗೊಳಿಸುವ ಪ್ರಕ್ರಿಯೆಯ ಮೇಲೆ ವೃತಿರಿಕ್ತ ಪರಿಣಾಮ ಬೀರಿದೆ.

ರಾಜ್ಯ ಸರ್ಕಾರದ ಅಧೀನದಲ್ಲಿ ಸರ್ಕಾರಿ, ಖಾಸಗಿ ಕಾಲೇಜುಗಳು, ಡೀಮ್ಡ್ ಮತ್ತು ಖಾಸಗಿ ಸ್ಟೇಟ್ ವಿವಿಗಳು ಸೇರಿ ಒಟ್ಟು 71 ಮೆಡಿಕಲ್ ಕಾಲೇಜುಗಳಿವೆ. 2024-25ನೇ ಸಾಲಿನಲ್ಲಿ 20,990 ವಿದ್ಯಾರ್ಥಿಗಳು ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿದ್ದು ಇವರ ಪ್ರಾಯೋಗಿಕ ಕಲಿಕೆಗೆ 2,099 ಮೃತದೇಹಗಳು ಬೇಕು. ಈಗ ಅಷ್ಟು ಮೃತದೇಹಗಳು ಸಿಗದ ಕಾರಣ ಕೆಲ ಕಾಲೇಜುಗಳಲ್ಲಿ ‘3ಡಿ’ ತಂತ್ರಜ್ಞಾನ ಆಧಾರಿತ ವರ್ಚುವಲ್ ಡಿಸೆಕ್ಷನ್ ಟೇಬಲ್ (ವಿಡಿಟಿ)ಅಳವಡಿಸಿ ಪಾಠ ಹೇಳುವ ಸ್ಥಿತಿ ಬಂದಿದೆ. ಆದರೆ, ಹುಬ್ಬಳ್ಳಿಯಲ್ಲಿರುವ ಕಿಮ್ಸ್‌ನಲ್ಲಿ ಶವಗಳ ಕೊರತೆ ಇಲ್ಲ. ಖಾಸಗಿ ಕಾಲೇಜುಗಳಲ್ಲಿ ಶವಗಳ ಕೊರತೆ ಕಂಡು ಬಂದಿದ್ದು, ಅವರು ಶವಗಳನ್ನು ನೀಡುವಂತೆ ಮನವಿ ಮಾಡಿದ್ದರು. ಆದರೆ, ನಮ್ಮಲ್ಲಿರುವ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆಯಾಗಬಾರದು ಎಂಬ ಉದ್ದೇಶದಿಂದ ಶವಗಳನ್ನು ನಾವು ಖಾಸಗಿ ಕಾಲೇಜುಗಳಿಗೆ ನೀಡುತ್ತಿಲ್ಲ ಎಂಬ ಮಾತನ್ನು ಕಿಮ್ಸ್ ನಿರ್ದೇಶಕ ಎಸ್.ಎಫ್.ಕಮ್ಮಾರ ಹೇಳುತ್ತಾರೆ.

ಕರ್ನಾಟಕದಲ್ಲಿ ಈ ಹಿಂದೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಅಧ್ಯಯನಕ್ಕೆ ಮೃತದೇಹಗಳು ಸಿಕ್ಕಿವೆ. ಆಗ ಮೆಡಿಕಲ್ ಕಾಲೇಜು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು. ಜತೆಗೆ ಒಂದು ಮೃತದೇಹದ ಮೇಲೆ 25 ವಿದ್ಯಾರ್ಥಿಗಳು ಓದುತ್ತಿದ್ದರು. ಆದರೆ ಈಗ ನಿಯಮ ಬದಲಾಗಿದೆ. ವಿದ್ಯಾರ್ಥಿಗಳು ಹೆಚ್ಚಾಗಿದ್ದಾರೆ. ದೇಹದಾನಿಗಳ ಸಂಖ್ಯೆಯೂ ಕಡಿಮೆ ಆಗುತ್ತಿರುವುದು ಶವಗಳ ಕೊರತೆಗೆ ಕಾರಣವಾಗಿದೆ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/01/2025 01:07 pm

Cinque Terre

72.26 K

Cinque Terre

1

ಸಂಬಂಧಿತ ಸುದ್ದಿ