ಸೋಮವಾರಪೇಟೆ :ಅತ್ಯಂತ ಕಡಿಮೆ ಬೆಲೆಗೆ ಪೀಠೋಪಕರಣ ಮಾರಾಟ ಮಾಡುತ್ತಿದ್ದ ವರ್ತಕ ಹಲವು ಮಂದಿಯಿಂದ ಮುಂಗಡ ಹಣ ಪಡೆದು ಇಂದು ಅಂಗಡಿ ತೆರೆಯದೆ ಇರುವುದರಿಂದ ಆತಂಕಗೊಂಡ ಸಾರ್ವಜನಿಕರು ಅಂಗಡಿ ಮುಂದೆ ಜಮಾಯಿಸಿದ ಘಟನೆ ನಡೆದಿದೆ.
ಪಟ್ಟಣದ ಎಂ.ಜಿ.ರಸ್ತೆಯ ದೂಪದ್ ಕಾಂಪ್ಲೆಕ್ಸ್ ನಲ್ಲಿ ಕಳೆದ ಎರಡು ತಿಂಗಳಿನಿಂದ ತಮಿಳುನಾಡು ಮೂಲದ ಬಾಬು ಕೇಶವನ್ ಹಾಗೂ ಕೆಲವು ವ್ಯಕ್ತಿಗಳು ಮಹಿ ಟ್ರೇಡರ್ಸ್ ಹೆಸರಿನಲ್ಲಿ ಪಟ್ಟಣ ಪಂಚಾಯಿತಿಯಿಂದ ವ್ಯಾಪಾರೋದ್ಯಮ ಪರವಾನಗಿ ಪಡೆದು ಪೀಠೋಪಕರಣ ಸೇರಿದಂತೆ ಮತ್ತಿತರ ಗೃಹೋಪಯೋಗಿ ವಸ್ತುಗಳ ಅಂಗಡಿ ತೆರೆದು ಅತ್ಯಂತ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿತ್ತು.
ತಾವು ಖರೀದಿಸುವ ವಸ್ತುಗಳ ಹಣವನ್ನು ಮುಂಚಿತವಾಗಿಯೇ ಕೊಟ್ಟು ಹತ್ತು ದಿನಗಳ ನಂತರ ವಸ್ತುಗಳನ್ನು ಪಡೆಯಬೇಕಾಗಿತ್ತು.
ಈ ರೀತಿಯಾಗಿ ಹಲವು ಮಂದಿ ಸೋಫಾ ಸೆಟ್,ಮಂಚ,ವಾರ್ಡ್ ರೋಬ್,ಡ್ರೆಸ್ಸಿಂಗ್ ಟೇಬಲ್, ಚೇರ್ ಮುಂತಾದ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಒಂದೆಡೆ ಸ್ಥಳೀಯ ಪೀಠೋಪಕರಣ ಅಂಗಡಿಯವರ ಕೆಂಗಣ್ಣಿಗೆ ಗುರಿಯಾದರೆ,ಮತ್ತೊಂದೆಡೆ ವಿಚಾರ ಊರೆಲ್ಲಾ ಹರಡಿ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಪಡೆಯಲು ನಾಗರಿಕರು ನಾ ಮುಂದು,ತಾ ಮುಂದು ಎಂದು ಹಣ ನೀಡಿ ಬುಕ್ ಮಾಡಿದ್ದಾರೆ.
ಆದರೆ, ಇಂದು ಬೆಳಿಗ್ಗೆ ಅಂಗಡಿ ತೆರೆಯದಿದ್ದರಿಂದ ವಿಚಾರ ತಿಳಿದ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಅಂಗಡಿ ಮುಂದೆ ಜಮಾಯಿಸಿ ಕೂಗಾಡತೊಡಗಿದರು. ಕೆಲವರು ಅಂಗಡಿ ಬೀಗ ಒಡೆದು ಒಳಗಿರುವ ವಸ್ತುಗಳನ್ನ ತೆಗೆದುಕೊಳ್ಳಲು ಚರ್ಚೆ ನಡೆಸುತ್ತಿದ್ದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಅಂಗಡಿ ಹಾಗೂ ಕೆಲವು ವಸ್ತುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ಅಂಗಡಿ ಮಾಲೀಕನ ವಿರುದ್ಧ ದೂರು ನೀಡಲು ತಿಳಿಸಿದ ಹಿನ್ನಲೆಯಲ್ಲಿ ಕೆಲವರು ದೂರು ನೀಡಿದ್ದಾರೆ.ಕೆಲವರು ಅಂಗಡಿ ಮಾಲೀಕನಿಗೆ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದ್ದು ಇದರಿಂದ ಹೆದರಿದ ವರ್ತಕ ಬೆಳಿಗ್ಗೆ ನಾಪತ್ತೆಯಾಗಿದ್ದಾನೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
PublicNext
02/01/2025 07:47 am