ವಾಷಿಂಗ್ಟನ್: ಅಮೆರಿಕ ಚುನಾವಣೆ ಪ್ರಚಾರ ವೇಳೆ, ‘ವಲಸಿಗರ ನಿಯಂತ್ರಣಕ್ಕೆ ಕ್ರಮ ಜರುಗಿಸಲಾಗುವುದು’ ಎಂದಿದ್ದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ದಿಢೀರ್ ನಿಲುವು ಬದಲಿಸಿಕೊಂಡಿದ್ದಾರೆ.
ಹೌದು. ವಲಸಿಗರ ವೀಸಾ ಆದ ‘ಎಚ್1ಬಿ’ ವೀಸಾ ಪರ ಅವರ ಆಪ್ತರಾದ ಉದ್ಯಮಿ ಎಲಾನ್ ಮಸ್ಕ್ ಹಾಗೂ ವಿವೇಕ್ ರಾಮಸ್ವಾಮಿ ಬ್ಯಾಟ್ ಬೀಸುತ್ತಿದ್ದಂತೆಯೇ ಟ್ರಂಪ್ ತಮ್ಮ ನಿರ್ಧಾರವನ್ನು ಬದಲಿಸಿಕೊಂಡಿದ್ದಾರೆ. ‘ಎಚ್1ಬಿ ವೀಸಾ ಎಂದೆ ನನಗೆ ಇಷ್ಟ. ನಾನು ಯಾವಾಗಲೂ ಎಚ್1ಬಿ ವೀಸಾ ಪರ’ ಎಂದು ಟ್ರಂಪ್ ಹೇಳಿಕೆ ನೀಡಿದ್ದಾರೆ. ಇದು ಟ್ರಂಪ್ ಬೆಂಬಲಿಗರನ್ನೇ ಗೊಂದಲಕ್ಕೀಡುಮಾಡಿದೆ.
ಚುನಾವಣೆ ಪ್ರಚಾರದಲ್ಲಿ ಟ್ರಂಪ್ ಅವರು, ‘ಎಚ್1ಬಿ ವೀಸಾದಿಂದ ಅಮೆರಿಕನ್ನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಅವರ ಜಾಗಕ್ಕೆ ವಿದೇಶಿಗರು ಬರುತ್ತಿದ್ದಾರೆ. ಹೀಗಾಗಿ ಅಧಿಕಾರಕ್ಕೆ ಬಂದ ಮೇಲೆ ವಲಸೆಯನ್ನು ನಿಯಂತ್ರಣ ಮಾಡುತ್ತೇನೆ’ ಎಂದಿದ್ದರು. ಈ ಮೂಲಕ ಎಚ್1ಬಿ ವೀಸಾ ನಿಯಂತ್ರಣದ ಸುಳಿವು ನೀಡಿದ್ದರು. ಆದರೆ ಕಳೆದ 2-3 ದಿನದಿಂದ ಟ್ರಂಪ್ ಅವರ ಪಾಳಯದಲ್ಲಿ ಎಚ್1ಬಿ ವೀಸಾ ಪರ ಹಾಗೂ ವಿರುದ್ಧ ಸಂಘರ್ಷ ಆರಂಭವಾಗಿತ್ತು. ಟ್ರಂಪ್ ಗೆಲುವಿಗೆ ಅತೀವವಾಗಿ ಶ್ರಮಿಸಿದ್ದ ಜಗತ್ತಿನ ನಂ.1 ಶ್ರೀಮಂತ ಎಲಾನ್ ಮಸ್ಕ್, ಅವರು ಎಚ್1ಬಿ ವೀಸಾ ಟೀಕಿಸಿದ್ದ ಒಬ್ಬರನ್ನು ಟ್ವೀಟರ್‌ನಲ್ಲಿ ತರಾಟೆಗೆ ತೆಗೆದುಕೊಂಡು, ‘ಎಚ್1ಬಿ ವೀಸಾ ಇಲ್ಲದಿದ್ದರೆ ನಾನು ಅಮೆರಿಕಕ್ಕೆ ಬರುತ್ತಿರಲಿಲ್ಲ. ಇಲ್ಲಿ ಸ್ಪೇಸ್ ಎಕ್ಸ್, ಟೆಸ್ಲಾ ಸೇರಿ ದೊಡ್ಡ ದೊಡ್ಡ ಕಂಪನಿಗಳೇ ಇರುತ್ತಿರಲಿಲ್ಲ. ಕೌಶಲ್ಯಯುತ ವಿದೇಶಿಗರಿಂದಲೇ ಈ ಕಂಪನಿಗಳು ತಲೆ ಎತ್ತಿ ಅಮೆರಿಕವನ್ನು ವಿಶ್ವದಲ್ಲಿಯೇ ಶ್ರೇಷ್ಠ ದೇಶವನ್ನಾಗಿ ಮಾಡಿದ್ದು’ ಎಂದು ಶನಿವಾರ ಹೇಳಿದ್ದರು.
ಇದಕ್ಕೆ ಟ್ರಂಪ್ ಬೆಂಬಲಿಗರು ಆಕ್ಷೇಪಿಸಿದ್ದರು. ಈ ನಡುವೆ ವಿವೇಕ್ ರಾಮಸ್ವಾಮಿ ಸಹ ಮಸ್ಕ್ ಬೆಂಬಲಕ್ಕೆ ನಿಂತರು. ಈ ಎಲ್ಲ ಬೆಳವಣಿಗೆ ಬೆನ್ನಲ್ಲೇ ಮಸ್ಕ್ ಪರ ಟ್ರಂಪ್ ಬ್ಯಾಟಿಂಗ್ ಮಾಡಿ, ‘ನನಗೆ ಈ ವೀಸಾ ಪದ್ಧತಿ ಬಗ್ಗೆ ಬಹಳ ಹೆಮ್ಮೆ ಇದೆ ಮತ್ತು ನಾನು ಅದರ ಪರವಾಗಿಯೇ ಇದ್ದೇನೆ. ಸ್ವತಃ ನನ್ನ ಸಂಸ್ಥೆಗಳಲ್ಲೂ ಹಲವು ಮಂದಿ ಎಚ್1-ಬಿ ವೀಸಾ ನೌಕರರಿದ್ದಾರೆ. ಅದೊಂದು ಉತ್ತಮ ಯೋಜನೆ’ ಎಂದಿದ್ದಾರೆ.
PublicNext
30/12/2024 02:56 pm