ಚಿಕ್ಕಮಗಳೂರು: ಪ್ರವಾಸಿಗರ ಸ್ವರ್ಗ ಕಾಫಿನಾಡು ಚಿಕ್ಕಮಗಳೂರು ಹೊಸ ವರ್ಷದ ಸ್ವಾಗತಕ್ಕೆ ಸಜ್ಜಾಗಿದೆ. ರಾಜ್ಯ ಸೇರಿದಂತೆ ಹೊರ ರಾಜಗಳಿಂದಲೂ ಆಗಮಿಸಿರುವ ಪ್ರವಾಸಿಗರು ಹೋಮ್ ಸ್ಟೇ, ರೆಸಾರ್ಟ್ ಗಳಲ್ಲಿ ಬೀಡು ಬಿಟ್ಟಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆಗೆ ಜಿಲ್ಲಾಡಳಿತ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಕುರಿತು ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಅಮಟೆ ಮಾಹಿತಿ ನೀಡಿದ್ದಾರೆ. ಪ್ರವಾಸಿತಾಣಗಳಲ್ಲಿ ಮೋಜು, ಮಸ್ತಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಿಗೆ ನಾಳೆ (31-12-2024)ರ ಸಂಜೆ 6 ಗಂಟೆಯಿಂದ (1-1-2025) ರ ಬೆಳಿಗ್ಗೆ 6 ಗಂಟೆಯವರೆಗೆ ಪ್ರವಾಸಿಗರನ್ನು ನಿಷೇಧಿಸಲಾಗಿದೆ. ಜಿಲ್ಲೆಯಲ್ಲಿ ರೇವ್ ಪಾರ್ಟಿಗಳನ್ನು ನಿಷೇಧಿಸಲಾಗಿದ್ದು ಒಂದು ವೇಳೆ ಇಂತಹ ಪಾರ್ಟಿಗಳನ್ನು ನಡೆಸಿದರೆ ಆಯೋಜಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುದಾಗಿ ಎಸ್ಪಿ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರ ಹಿತದೃಷ್ಟಿಯಿಂದ ರಾತ್ರಿ 10 ಗಂಟೆಯ ನಂತರ ಔಟ್ ಡೋರ್ ಡಿಜೆಗಳಿಗೆ ನಿಷೇಧ ಹೇರಲಾಗಿದ್ದು . ಹೊಸ ವರ್ಷದ ಆಚರಣೆಗಳಿಗೆಂದು ಈ ಬಾರಿ ನೂತನವಾಗಿ ಪರಿಚಯಿಸಿರುವ ತಾತ್ಕಾಲಿಕ ಸಿಎಲ್ 5 ಲೈಸೆನ್ಸ್ ಪಡೆದವರು ಕೂಡ ಕಡ್ಡಾಯವಾಗಿ ಪೊಲೀಸ್ ಅನುಮತಿ ಪಡೆಯುವುದು ಕಡ್ಡಾಯ. ನಾಳೆ ಸಂಜೆಯ ನಂತರ ಪೊಲೀಸರು ರಸ್ತೆಗಳಲ್ಲಿ ಜಿಗ್ ಜಾಗ್ ರೀತಿಯಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ಮದ್ಯಪಾನ ಮಾಡಿ ವೀಲಿಂಗ್ ಮಾಡುವವರ ವಿರುದ್ಧ ಪೊಲೀಸರು ಹದ್ದಿನ ಕಣ್ಣೀಡಲಿದ್ದಾರೆ. ಜಿಲ್ಲೆಯಾದ್ಯಂತ ಈಗಾಗಲೇ ಡ್ರಿಂಕ್ & ಡ್ರೈವ್ ಮಾಡುವವರ ವಿರುದ್ಧ ಕೇಸ್ ದಾಖಲಿಸಿ ಬಿಸಿ ಮುಟ್ಟಿಸಲಾಗುತ್ತಿದ್ದು ನಾಳೆ ಹೆಚ್ಚಿನ ತಪಾಸಣೆ ಮಾಡಲಾಗುವುದು ಎಂದು ಕುಡಿದು ವಾಹನ ಚಾಲನೆ ಮಾಡುವವರಿಗೆ
ಎಸ್ಪಿ ವಿಕ್ರಂ ಅಮಟೆ ಎಚ್ಚರಿಕೆ ನೀಡಿದ್ದಾರೆ.
PublicNext
30/12/2024 02:25 pm