ಮಡಿಕೇರಿ: ಕಂಡಕರೆ ಗಾಂಧಿ ಯುವಕ ಸಂಘದಿಂದ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ರಾಷ್ಟ್ರ ಮಟ್ಟದ ಅಂಡರ್ 20 ಕಾಲ್ಚೆಂಡು ಪಂದ್ಯಾವಳಿಯಲ್ಲಿ ಸುಂಟ್ಟಿಕೊಪ್ಪದ ಸನ್ಸಬೀಲ್ ತಂಡವು ಚಾಂಪಿಯನ್ ಪ್ರಶಸ್ತಿಯನ್ನು ಅಲಂಕರಿಸಿದೆ.
ರನ್ನರ್ಸ್ ಪ್ರಶಸ್ತಿಗೆ ಚೋಕ್ ಸಿಟಿ ತಂಡವು ತೃಪ್ತಿಪಟ್ಟುಕೊಂಡಿದೆ.
ಜಿದ್ದಾಜಿದ್ದಿನಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಸನ್ಸಬೀಲ್ ತಂಡವು ಮೊದಲಾರ್ಧದಲ್ಲೇ ಆಟದಲ್ಲಿ ಸಂಪೂರ್ಣ ಹಿಡಿತವನ್ನು ಸಾಧಿಸಿ,
ಆಕ್ರಮಣಕಾರಿ ಆಟಕ್ಕೆ ಮುಂದಾಗಿತ್ತು.
ಸನ್ಸಬೀಲ್ ತಂಡದ ಆಕ್ರಮಣಕಾರಿ ಆಟಕ್ಕೆ ಬ್ರೇಕ್ ಹಾಕುವಲ್ಲಿ ವಿಫಲತೆ ಕಂಡ ಚೋಕ್ ಸಿಟಿ ತಂಡವು 3-0 ಗೋಲುಗಳ ಅಂತರದಿಂದ ಸೋಲುಕಂಡಿತ್ತು.
ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸನ್ಸಬೀಲ್ ತಂಡವು 4-0 ಗೋಲುಗಳ ಅಂತರದಿಂದ ಗಾಂಧಿ ಎಫ್.ಸಿ ತಂಡದ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿತು.
ಎರಡನೇ ಸೆಮಿಫೈನಲ್ ಪಂದ್ಯವು ಎಸ್.ಆರ್.ವಿ ಮಡಿಕೇರಿ ಹಾಗೂ ಚೋಕ್ ಸಿಟಿ ತಂಡಗಳ ನಡುವೆ ನಡೆಯಿತು.
ಎರಡು ತಂಡಗಳ ಸಮಬಲ ಹೋರಾಟದಿಂದ 1-1 ಗೋಲುಗಳನ್ನು ದಾಖಲಿಸಿ ನಿಗದಿತ ಸಮಯದಲ್ಲಿ ಸಮಬಲ ಸಾಧಿಸಿತು.
ಅಂತಿಮವಾಗಿ ಪೆನಾಲ್ಟಿ ಶೂಟೌಟ್ ನಲ್ಲಿ ಚೋಕ್ ಸಿಟಿ ತಂಡವು 3-2 ಗೋಲುಗಳ ಅಂತರದಿಂದ ಗೆದ್ದು ಫೈನಲ್ ಪ್ರವೇಶಿಸಿತು.
24 ತಂಡಗಳು ಭಾಗವಹಿಸಿದ್ದ ಅಂಡರ್ 20 ಕಾಲ್ಚೆಂಡು ಪಂದ್ಯಾವಳಿಯಲ್ಲಿ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಸನ್ಸಬೀಲ್ ತಂಡದ ಮಶೂದ್,ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಚೋಕ್ ಸಿಟಿ ತಂಡದ ಅನ್ಶೀದ್,ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಗಾಂಧಿ ಎಫ್.ಸಿ ತಂಡದ ಸಮ್ಮಾಸ್,ಅತ್ಯುತ್ತಮ ಡಿಫೆಂಡರ್ ಪ್ರಶಸ್ತಿಯನ್ನು ಸನ್ಸಬೀಲ್ ತಂಡದ ರಶೀದ್ ಪಡೆದುಕೊಂಡರು.
ಪಂದ್ಯಾವಳಿಯ ತೀರ್ಪುಗಾರರಾಗಿ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರರಾದ ದರ್ಶನ್ ಸುಕುಮಾರ್,ಉನೈಸ್ ಗರಗಂದೂರು ಕಾರ್ಯನಿರ್ವಹಿಸಿದ್ದರು.
Kshetra Samachara
29/12/2024 09:17 pm