ಬೆಂಗಳೂರು: ಮಾಜಿ ಶಾಸಕ ವರ್ತೂರು ಪ್ರಕಾಶ್ ಅವರ ಆಪ್ತೆ ಎಂದು ನಂಬಿಸಿ ಜ್ಯುವೆಲ್ಲರಿ ಶಾಪ್ ಮಾಲೀಕನಿಗೆ ವಂಚಿಸಿದ ಆರೋಪದಡಿ ಬಂಧನವಾಗಿರುವ ಶ್ವೇತಾ ಗೌಡ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರಗತಿ ಜ್ಯುವೆಲ್ಲರಿ ಶಾಪ್ ಮಾಲೀಕನಿಂದ 20.75 ಲಕ್ಷ ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿರುವ ಆರೋಪ ಶ್ವೇತಾ ಗೌಡ ವಿರುದ್ಧ ಕೇಳಿಬಂದಿದೆ. ಜ್ಯುವೆಲ್ಲರಿ ಶಾಪ್ ಮಾಲೀಕ ಬಾಲರಾಜ್ ಶೇಟ್ ನೀಡಿದ ದೂರಿನನ್ವಯ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಆರೋಪವೇನು?: ಬೆಂಗಳೂರಿನಲ್ಲಿ ವಂಚನೆಗೊಳಗಾದ ಜ್ಯುವೆಲ್ಲರಿ ಶಾಪ್ ಮಾಲೀಕ ಸಂಜಯ್ ಬಾಫ್ನಾ ಮೂಲಕ 6 ತಿಂಗಳ ಹಿಂದೆ ಬಾಲರಾಜ್ ಶೇಟ್‌ಗೆ ಶ್ವೇತಾ ಗೌಡ ಪರಿಚಯವಾಗಿದ್ದಳು."ನಾನು ಸಂಜಯ್ ಬಳಿ ಕೋಟಿಗಟ್ಟಲೆ ವ್ಯವಹಾರ ಹೊಂದಿದ್ದೇನೆ, ಹಳೆಯ ಆ್ಯಂಟಿಕ್ ಜ್ಯುವೆಲ್ಲರಿ ಹಾಗೂ ವಜ್ರದ ಆಭರಣಗಳನ್ನ ಖರೀದಿ ಮಾಡುತ್ತೇನೆ. ನೀವು 250 ಗ್ರಾಂ ತೂಕದ ಆ್ಯಂಟಿಕ್ ಆಭರಣಗಳನ್ನ ತಯಾರು ಮಾಡಿಕೊಡಿ" ಎಂದು ಬಾಲರಾಜ್ ಶೇಟ್‌ಗೆ ನಂಬಿಸಿದ್ದಳು.
ಆ ಬಳಿಕ ಯಾವುದೇ ರೀತಿ ಆಭರಣಕ್ಕಾಗಿ ಸಂಪರ್ಕಿಸದಿದ್ದರಿಂದ ಬಾಲರಾಜ್ ಶೇಟ್ ಸಹ ಸುಮ್ಮನಾಗಿದ್ದರು. ಆದರೆ, ಡಿಸೆಂಬರ್ 11ರಂದು ಬಾಲರಾಜ್ ಶೇಟ್ 285 ಗ್ರಾಂ ತೂಕದ ಹಳೆಯ ಒಡವೆಗಳ ವ್ಯಾಪಾರಕ್ಕಾಗಿ ತಮ್ಮ ಸಹೋದರ ನಾಗರಾಜ್ ಅವರನ್ನ ಬೆಂಗಳೂರಿಗೆ ಕಳಿಸಿದ್ದರು. ಆದರೆ, ಬೆಂಗಳೂರಿನಲ್ಲಿ ವ್ಯಾಪಾರಿ ಸಿಗದಿದ್ದರಿಂದ, ತಾವು ಮಾರಾಟಕ್ಕೆಂದು ಕಳುಹಿಸಿದ್ದ ಒಡವೆಗಳ ಫೋಟೋಗಳನ್ನ ಶ್ವೇತಾ ಗೌಡಗೆ ವಾಟ್ಸ್ಆ್ಯಪ್‌ನಲ್ಲಿ ಕಳಿಸಿದ್ದರು. ತಕ್ಷಣ ರಿಪ್ಲೈ ಮಾಡಿದ್ದ ಶ್ವೇತಾಗೌಡ,"ಈ ಆಭರಣಗಳನ್ನ ನಾನೇ ಖರೀದಿಸುತ್ತೇನೆ'' ಎಂದಿದ್ದಳು. ಅದರಂತೆ ಬಾಲರಾಜ್ ಅವರ ಸಹೋದರ ಹಾಗೂ ಶ್ವೇತಾ ಗೌಡ ಯು.ಬಿ.ಸಿಟಿ ಸಮೀಪದ ಕಾಫಿ ಡೇನಲ್ಲಿ ಭೇಟಿಯಾಗಿದ್ದರು.
ಆ ಸಂದರ್ಭದಲ್ಲಿ ಆಭರಣಗಳನ್ನ ಪಡೆದಿದ್ದ ಶ್ವೇತಾ ಗೌಡ, 5 ಲಕ್ಷದ 2 ಚೆಕ್‌ಗಳು ಹಾಗೂ 6 ಲಕ್ಷದ 1 ಚೆಕ್ ನೀಡಿ ಬಾಕಿ 4.75 ಲಕ್ಷವನ್ನ ಮನೆಗೆ ಹೋಗಿ ಆರ್‌ಟಿಜಿಎಸ್ ಮಾಡುವುದಾಗಿ ಹೇಳಿದ್ದಳು. ಆದರೆ ಡಿಸೆಂಬರ್ 13ರಂದು ಬ್ಯಾಂಕ್‌ನಲ್ಲಿ ಚೆಕ್ ಹಾಜರುಪಡಿಸಿದಾಗ ಅವು ಅಮಾನ್ಯವೆಂದು ತಿಳಿದು ಬಂದಿದೆ. ಉಳಿದ 4.75 ಲಕ್ಷ ಹಣವನ್ನೂ ಸಹ ಆರ್‌ಟಿಜಿಎಸ್ ಮಾಡದ ಶ್ವೇತಾ ಗೌಡಗೆ ಕರೆ ಮಾಡಿ ವಿಚಾರಿಸಿದಾಗ "ಬ್ಯಾಂಕ್‌ನಲ್ಲಿ ಏನೋ ಸಮಸ್ಯೆಯಾಗಿದೆ" ಎಂದು ಹೇಳಿದ್ದಳು. ಆ ನಂತರ ಶ್ವೇತಾಗೌಡ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಅನುಮಾನಗೊಂಡ ಬಾಲರಾಜ್ ಶೇಟ್, ಸಂಜಯ್ ಬಾಫ್ನಾಗೆ ಕರೆ ಮಾಡಿದಾಗ, ಆಕೆ ವಂಚನೆ ಪ್ರಕರಣದಲ್ಲಿ ಬಂಧನವಾಗಿರುವುದು ತಿಳಿದಿದೆ ಎಂದು ದೂರು ನೀಡಲಾಗಿದೆ.
ಬಾಲರಾಜ್ ಶೇಟ್ ನೀಡಿರುವ ದೂರಿನನ್ವಯ ಸದ್ಯ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಶ್ವೇತಾ ಗೌಡ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
PublicNext
29/12/2024 05:37 pm