ಉಡುಪಿ: ಹೊಸ ವರ್ಷ ಮತ್ತು ವರ್ಷಾಂತ್ಯದ ರಜೆಗಳ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿದೆ.ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರದಲ್ಲಿ ಮಾರ್ಪಾಡು ಮಾಡಲಾಗಿದೆ.ಸಾರ್ವಜನಿಕರು ಮತ್ತು ವಾಹನ ಸವಾರರು ಸಹಕಾರ ನೀಡಬೇಕು ಎಂದು ಉಡುಪಿ ಎಸ್ಪಿ ಡಾ.ಅರುಣ್ ಕೆ.ಮನವಿ ಮಾಡಿದ್ದಾರೆ.
ಡಿಸೆಂಬರ್ 28 ರಿಂದ 4 ಗಂಟೆಯಿಂದ ಜನವರಿ 1 ರ ರಾತ್ರಿ 9 ಗಂಟೆಯವರೆಗೆ ಈ ನಿಯಮ ಜಾರಿಯಲ್ಲಿರುತ್ತದೆ. ಸೂಚಿಸಿದ ಮಾರ್ಗಗಳಲ್ಲಿ ಚಲಿಸುವಂತೆ ಅವರು ಮಾಹಿತಿ ನೀಡಿದ್ದಾರೆ. ಮಣಿಪಾಲ ಕಡೆಯಿಂದ ಬರುವ ಸರಕು ಲಘು ವಾಹನ, ಮಂಗಳೂರು, ಕಾಪು ಕಡೆ ಹೋಗುವವರು ಶಾರದಾ ಕಲ್ಯಾಣ ಮಂಟಪದ ಕಡೆಯಿಂದ ಚಲಿಸಬೇಕು. ಕಲ್ಸಂಕ ವೃತ್ತ ಗುಂಡಿಬೈಲು ಕಡೆಯಿಂದ ಬರುವ ವಾಹನಗಳು ಕಡಿಯಾಳಿ ಎದುರು ತಿರುಗಿಸಿಕೊಂಡು ಕೃಷ್ಣಮಠ ಮತ್ತು ಉಡುಪಿ ಕಡೆ ಬರಬೇಕು.
ಮಣಿಪಾಲ ಕಡೆಯಿಂದ ಬಂದು ಗುಂಡಿಬೈಲ್ ಕಡೆ ಹೋಗುವವರು ಸಿಟಿ ಬಸ್ ನಿಲ್ದಾಣದ ಹತ್ತಿರ ತಿರುಗಿಸಿಕೊಂಡು ಬರಬೇಕು. ಮಲ್ಪೆಯಿಂದ ಬರುವವರು ಕರಾವಳಿಗೆ ಬಂದು ಎಡಕ್ಕೆ ತಿರುಗಿ ಸರ್ವಿಸ್ ರಸ್ತೆಯಲ್ಲಿ ಚಲಿಸಿ ನಿಟ್ಟೂರು ಆಭರಣ ಮೋಟಾರ್ಸ್ ಎದುರು ಯೂ ಟರ್ನ್ ಮಾಡಿಕೊಂಡು ನಗರದ ಕಡೆ ಬರಬೇಕು. ಮಂಗಳೂರು ಕಡೆಯಿಂದ ಬರುವವರು ಮಲ್ಪೆ ಹೋಗುವವರನ್ನು ಹೊರತುಪಡಿಸಿ ಉಳಿದವರೆಲ್ಲರೂ ನಿಟ್ಟೂರು (ಆಭರಣ ಮೋಟರ್ಸ್) ಎದುರು ತಿರುಗಿಸಿ ಉಡುಪಿಗೆ ಬರುಬೇಕು. ಮಲ್ಪೆ ಬೀಚ್ ಕಡೆಯಿಂದ ಬರುವವರು ಬಲರಾಮ ಸರ್ಕಲ್ ನಿಂದ ಹೊರಟು ಹೂಡೆ, ನೇಜಾರು ಮಾರ್ಗ ಬಳಸಿ ಸಂತೆಕಟ್ಟೆಯಿಂದ ರಾಷ್ಟ್ರೀಯ ಹೆದ್ದಾರಿ ಸೇರಬೇಕು ಎಂದವರು ಮಾಹಿತಿ ನೀಡಿದ್ದಾರೆ.
Kshetra Samachara
28/12/2024 02:48 pm