ಬೆಂಗಳೂರು: ಆಕೆ ಅಪ್ಪ- ಅಮ್ಮನನ್ನು ಬಿಟ್ಟು ಇಡೀ ಕುಟುಂಬದ ವಿರೋಧದ ನಡುವೆ ಪ್ರೀತಿಸಿದವನ ಹಿಂದೆ ಹೋಗಿದ್ದಳು. ಒಂದಷ್ಟು ದಿನ ಕಳೆದಂತೆ ಮಗಳು ತಾಯಿ ಆಗ್ತಿದ್ದಾಳೆ ಅನ್ನೋ ಸುದ್ದಿ ಕೇಳಿ ಹೆತ್ತವರು ಮಗಳನ್ನ ಮಾತನಾಡಿಸಿದ್ರು. ಆದ್ರೆ, ಪ್ರೀತಿಗಾಗಿ ಮನೆ ಬಿಟ್ಟು ಬಂದ ಹುಡುಗಿಗಿಂತ ಆ ಪಾಪಿ ಪತಿಗೆ ಪರಸ್ತ್ರೀಯರ ಮೋಹ ಶುರುವಾಗಿ ನಂಬಿ ಬಂದವಳ ಬಿಟ್ಟು ಇನ್ನಿಬ್ಬರು ಮಹಿಳೆಯರ ಜೊತೆ ಲವ್ವಿ-ಡವ್ವಿ ಶುರು ಮಾಡಿದ್ದ!
ಗಂಡನ ನಡೆಗೆ ಬೇಸತ್ತು ಚೆಂದುಳ್ಳಿ ಚೆಲುವೆ ನೇಣಿಗೆ ಶರಣಾಗಿರೋ ದಾರುಣ ಘಟನೆ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಕೆಂಪೇಗೌಡ ನಗರದಲ್ಲಿ ನಡೆದಿದೆ. ಅನೈತಿಕ ಸಂಬಂಧವಲ್ಲದೆ ಬೆಟ್ಟಿಂಗ್ ಚಟಕ್ಕೆ ಬಿದ್ದಿದ್ದ ಪತಿ, ಹಣಕ್ಕಾಗಿ ಪೀಡಿಸಿದ್ದಕ್ಕೂ ಪತ್ನಿ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಹೀಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಮಹಿಳೆ ಹೆಸರು ರಂಜಿತಾ(25). ಡಿಸೆಂಬರ್ 25ರಂದು ಘಟನೆ ನಡೆದಿದ್ದು, ಮೃತಳ ಸಹೋದರ, ರಂಜಿತಾ ಪತಿ ಕಿಶೋರ್ ವಿರುದ್ಧ ಬ್ಯಾಡರಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾನೆ. ಪತಿ ಕಿಶೋರ್ ಗೆ ಇಬ್ಬರು ಮಹಿಳೆಯರೊಂದಿಗೆ ಸಂಬಂಧ ಇತ್ತು ಅನ್ನೋದು ಆತನ ಮೊಬೈಲ್ ನಲ್ಲಿದ್ದ ವಿಡಿಯೋ ಗಳಿಂದಲೇ ರಂಜಿತಾಗೆ ಗೊತ್ತಾಗಿದೆ. ಅಷ್ಟೇ ಅಲ್ಲದೆ, ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ಜೊತೆಗೆ ಸೇರಿ ಕಿಶೋರ್, ರಂಜಿತಾಗೆ ಚಿತ್ರಹಿಂಸೆ ನೀಡಿ ಅಕ್ಕನ ಸಾವಿಗೆ ಕಾರಣರಾಗಿದ್ದಾರೆಂದು ತಮ್ಮ ದೂರು ನೀಡಿದ್ದಾನೆ. ಕಿಶೋರ್ ಹಾಗೂ ಇಬ್ಬರು ಮಹಿಳೆಯರಾದ ನಿರ್ಮಲಾ ಹಾಗೂ ವಿನಯತಾ ಸೇರಿ 10 ಜನರ ವಿರುದ್ಧ ಎಫ್.ಐ.ಆರ್. ದಾಖಲಾಗಿದೆ.
ದೂರಿನಲ್ಲಿ ಏನಿದೆ? ಅಂತ ನೋಡೋದಾದ್ರೆ... 2018ರ ಫೆಬ್ರವರಿಯಲ್ಲಿ ರಂಜಿತಾ ಪ್ರೀತಿಸಿ ಕಿಶೋರ್ ಜೊತೆ ಓಡಿ ಹೋಗಿ ಮದುವೆಯಾಗಿದ್ಲು. ಬಳಿಕ ಒಂದು ಮಗುವಾದ ನಂತರ ಮನೆಯವರಿಗೆ ರಂಜಿತಾ ಆಗಾಗ ಕರೆ ಮಾಡ್ತಿದ್ದು, ಆ ವೇಳೆ ಗಂಡನ ಬೆಟ್ಟಿಂಗ್ ಚಟದ ಬಗ್ಗೆ ಹೇಳಿ ಕಷ್ಟದಲ್ಲಿದ್ದೇನೆ ಸಹಾಯ ಮಾಡುವಂತೆ ಕೇಳಿದ್ಲು. ಆಗ ಆಕೆಯ ತಮ್ಮ ಇಬ್ಬರಿಗೂ ಮಾಗಡಿಯಲ್ಲಿ ಮನೆ ಮಾಡಿ ಕೊಟ್ಟಿದ್ರಂತೆ.
ಜೊತೆಗೆ ಚಿಕ್ಕಪ್ಪನ ಜೊತೆ ಸಾಲ ಮಾಡಿ ಸಾಲವನ್ನೂ ರಂಜಿತಾ ತಮ್ಮನೇ ತೀರಿಸಿದ್ನಂತೆ. ಬಳಿಕ ಜೀವನಕ್ಕೆ ಅಂತ ಒಂದು ಆಟೋವನ್ನು ಕೂಡ ಕೊಡಿಸಿದ್ದರು. ಸರಿ ಹೋಗದ ಕಿಶೋರ್, ರಂಜಿತಾ ಬಳಿ ಹಣಕ್ಕೆ ಪೀಡಿಸಿ ಹಿಂಸೆ ಮಾಡ್ತಿದ್ನಂತೆ. ಹಣ ತೆಗೆದುಕೊಂಡು ಬಾ ಎಂದು ಹಲ್ಲೆ ಮಾಡಿದ್ದಾಗಿ ಅಕ್ಕ ಹೇಳಿಕೊಂಡಿದ್ದಾಳಂತೆ.
ಅಷ್ಟೇ ಅಲ್ಲದೆ, ಕಿಶೋರ್ ಇಬ್ಬರು ಮಹಿಳೆಯರು ನಮ್ಮ ಜೊತೆಗೆ ಇರಲಿ ಅಂತ ಹಿಂಸೆ ನೀಡ್ತಿದ್ದ ಎಂದು ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಬ್ಯಾಡರಹಳ್ಳಿ ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ. ಇನ್ನೂ ರಂಜಿತಾ ಸತ್ತ ನಂತರ ರಂಜಿತಾ ಕಣ್ಣುಗಳನ್ನು ದಾನ ಮಾಡಿ ಕುಟುಂಬಸ್ಥರು ಹೃದಯ ವೈಶಾಲ್ಯತೆ ತೋರಿದ್ದಾರೆ.
PublicNext
27/12/2024 11:05 pm