ಮಡಿಕೇರಿ: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ 2024-25ನೇ ಸಾಲಿನ ಗ್ರಾಮಸಭೆಗೆ ಪ್ರಮುಖ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾದ ಕಾರಣ ತೀವ್ರ ಅಸಮಾಧಾನಗೊಂಡ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ ಸಭೆಯಿಂದ ಹೊರ ನಡೆದರು.
ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂದೋಡಿ ಜಗನ್ನಾಥ ಅವರ ಅಧ್ಯಕ್ಷತೆಯಲ್ಲಿ ಕಾನ್‌ಬೈಲು ಸರಕಾರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಉಪಸ್ಥಿತರಿದ್ದು ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ತಯಾರಿ ಮಾಡಿಕೊಂಡಿದ್ದರು.ಪ್ರಮುಖ ಇಲಾಖೆಗಳಾದ ಕಂದಾಯ, ನೀರಾವರಿ, ಆಹಾರ, ಅರಣ್ಯ ಆದಿಕಾರಿಗಳು ಗೈರು ಹಾಜರಾಗಿದ್ದ ಕಾರಣ ಗ್ರಾಮಸ್ಥರು ಸಭೆ ಮುಂದೂಡಬೇಕೆAದು ಆಗ್ರಹಿಸಿದರು.
ಅಧ್ಯಕ್ಷ ಮಂದೋಡಿ ಜಗನ್ನಾಥ ಮಾತನಾಡಿ ಇಂದಿನ ಸಭೆಯಲ್ಲಿ ಗ್ರಾಮಸ್ಥರು ನೀಡುವ ಅಹವಾಲನ್ನು ಆಯಾ ಇಲಾಖೆಯ ಅಧಿಕಾರಿಗಳಿಗೆ ಕಳುಹಿಸಿ ಅದನ್ನು ಅನುಷ್ಠಾನಗೊಳಿಸುವ ಪ್ರಯತ್ನ ಮಾಡೋಣ ಎಂದರು.
ಈ ಸಂದರ್ಭ ಮಾತನಾಡಿದ ಗ್ರಾಮಸ್ಥರಾದ ರಾಮಯ್ಯ, ಅಂಬೆಕಲ್ ಚಂದ್ರು, ಶಾಂತಪ್ಪ ಮತ್ತಿತರರು ಪಡಿತರ, ಕುಡಿಯುವ ನೀರು, ರಸ್ತೆ ಮತ್ತು ಅರಣ್ಯ ಇಲಾಖೆಗೆ ಸಂಬAಧಿಸಿದ ಸಮಸ್ಯೆಗಳಿದ್ದು, ಅಧಿಕಾರಿಗಳು ಇಲ್ಲದೆ ಸಭೆ ನಡೆಸಿ ಪ್ರಯೋಜನವಿಲ್ಲ, ಸಭೆಯನ್ನು ಮುಂದೂಡಿ ಎಂದು ಒತ್ತಾಯಿಸಿದರು. ಗೈರು ಹಾಜರಾದ ಅಧಿಕಾರಿಗಳಿಗೆ ದಿಕ್ಕಾರ ಕೂಗಿ ಸಭೆಯಿಂದ ಹೊರ ನಡೆದರು.
ಜಿ.ಪಂ ಸಹಾಯಕ ಅಭಿಯಂತರ ಫಯಾಜ್ ಅಹ್ಮದ್ ಮಾತನಾಡಿ ನಾಕೂರು ಶಿರಂಗಾಲ ಗ್ರಾ.ಪಂ ಗೆ ಸರಕಾರದಿಂದ ರಸ್ತೆ, ಕೆರೆ, ಅಂಗನವಾಡಿ ಕೇಂದ್ರದ ದುರಸ್ತಿ, ತಡೆಗೋಡೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ 58.5ಲಕ್ಷ ರೂ. ಕ್ರಿಯಾಯೋಜನೆಗೆ ಅನುಮೋದನೆ ದೊರೆತ್ತಿದೆ. ಶಾಸಕರು ಸಧ್ಯದಲ್ಲೆ ಈ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದರು.
Kshetra Samachara
26/12/2024 03:33 pm