ಕುಂದಾಪುರ: ಹೊಗಳಿಕೆ ಮತ್ತು ತಿರಸ್ಕಾರ ಎರಡನ್ನೂ ಸಮಾನವಾಗಿ ಸ್ವೀಕರಿಸಿದಾಗ ಮನುಷ್ಯ ಉತ್ತುಂಗ ಶಿಖರಕ್ಕೇರುತ್ತಾನೆ. ನಾಡು ಕಂಡ ಅಂತಹ ಅಪರೂಪದ ಸಾಧಕ, ಸಮಚಿತ್ತದ ನಾಯಕ ಬಿ ಅಪ್ಪಣ್ಣ ಹೆಗ್ಡೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಹೇಳಿದರು.
ಮಂಗಳವಾರ ರಾತ್ರಿ ಸಮೀಪದ ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಬಿ.ಅಪ್ಪಣ್ಣ ಹೆಗ್ಡೆ ಜನ್ಮದಿನೋತ್ಸವ ಸಮಿತಿ ಹಾಗೂ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ (ರಿ) ವತಿಯಿಂದ ನಡೆದ ಬಸ್ರೂರು ಅಪ್ಪಣ್ಣ ಹೆಗ್ಡೆಯವರ 90 ನೇ ಹುಟ್ಟುಹಬ್ಬ ಆಚರಣೆ, ದತ್ತಿನಿಧಿ ವಿತರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವದಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ್ ರೈ ಅವರು ಬಸ್ರೂರು ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿ ಸ್ವೀಕರಿಸಿ, ನಾಡಿನ ಹಿರಿತ್ರಯರ ನಡುವೆ ಕುಳಿತುಕೊಳ್ಳುವ ಯೋಗ ನನ್ನ ಜೀವನದ ಧನ್ಯತೆಯ ಭಾಗವಾಗಿದೆ ಎಂದರು. ಬಿ.ಅಪ್ಪಣ್ಣ ಹೆಗ್ಡೆ ಜನ್ಮ ದಿನೋತ್ಸವ ಸಮಿತಿ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ಅಪ್ಪಣ್ಣ ಹೆಗ್ಡೆ, ಅಮರನಾಥ ಶೆಟ್ಟಿ ಹಾಗೂ ಮೋಹನ ಆಳ್ವರ ನಡುವಿನ ಸಂಬಂಧಗಳು ಬೆಳೆದು ಬಂದ ರೀತಿಯನ್ನು ವಿವರಿಸಿದರು.
ಜನ್ಮದಿನೋತ್ಸವ ಆಚರಿಸಿಕೊಂಡ ಬಸ್ರೂರು ಅಪ್ಪಣ್ಣ ಹೆಗ್ಡೆ ಮಾತನಾಡಿ, ತಮ್ಮ ಕಾಲದ ರಾಜಕೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗಳು ಹಾಗೂ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಹಂಚಿಕೊಳ್ಳುತ್ತಾ, ಉತ್ತಮ ಸಮಾಜಕ್ಕಾಗಿ ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳಲ್ಲಿ ನೈತಿಕ ಮತ್ತು ಮೌಲಿಕ ಶಿಕ್ಷಣಗಳ ಮನೋಭಾವ ಹೆಚ್ಚಾಗಬೇಕಿದೆ. ಈ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಚಿಂತನೆ ನಡೆಸಬೇಕಿದೆ ಎಂದರು. ರಾಜಕಾರಣಿಗಳು ತಮ್ಮ ಸ್ವಾರ್ಥಕೋಸ್ಕರ ಜನಸಾಮಾನ್ಯರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದರು.
ಪ್ರತಿಷ್ಠಾನದ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಅಶಕ್ತರಿಗೆ ಸಹಾಯಧನ ಹಸ್ತಾಂತರಿಸಲಾಯಿತು. ನೂರಾರು ಸಂಘ ಸಂಸ್ಥೆಗಳಿಂದ ಸನ್ಮಾನ ಹಾಗೂ ಅಭಿನಂದನೆ ನಡೆಯಿತು. ಉದ್ಯಮಿ ಕೆ.ಪ್ರಕಾಶ್ ಶೆಟ್ಟಿ ಬಂಜಾರ, ಶಾಸಕರಾದ ಡಿ.ಟಿ.ರಾಜೇಗೌಡ ಶೃಂಗೇರಿ, ಎಂ.ಕಿರಣ್‌ಕುಮಾರ ಕೊಡ್ಗಿ, ಸುರೇಶ್ ಶೆಟ್ಟಿ ಗುರ್ಮೆ, ಯಶ್‌ಪಾಲ್ ಸುವರ್ಣ, ಗುರುರಾಜ್ ಗಂಟಿಹೊಳೆ, ವಿಧಾನಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪ್‌ಚಂದ್ರ ಶೆಟ್ಟಿ, ಮಾಜಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಮೊದಲಾದವರು ಅಪ್ಪಣ್ಣ ಹೆಗ್ಡೆಯವರನ್ನು ಅಭಿನಂದಿಸಿದರು.
ರಾಮ್‌ರತನ್ ಹೆಗ್ಡೆ, ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯಾ, ಸುಶಾಂತ್ ರೈ, ನಿರುಪಮಾ ಹೆಗ್ಡೆ, ಪ್ರೀತಮ್ ಎಸ್ ರೈ, ಆನಂದ ಸಿ ಕುಂದರ್, ಭೋಜರಾಜ್ ಶೆಟ್ಟಿ ಬೈಂದೂರು, ಟಿ.ಬಿ.ಶೆಟ್ಟಿ ಕುಂದಾಪುರ ಇದ್ದರು. ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ (ರಿ) ದ ಟ್ರಸ್ಟಿ ಅನುಪಮಾ ಎಸ್. ಶೆಟ್ಟಿ ಸ್ವಾಗತಿಸಿದರು, ಆಡಳಿತ ಟ್ರಸ್ಟಿ ರಾಮ್‌ಕಿಶನ್ ಹೆಗ್ಡೆ ಟ್ರಸ್ಟ್ ವರದಿ ಮಂಡಿಸಿದರು, ಉದಯ್ ಶೆಟ್ಟಿ ಪಡುಕರೆ ಅಭಿನಂದನಾ ಪತ್ರ ವಾಚಿಸಿದರು, ರಾಜೇಶ್ ಕೆ.ಸಿ ನಿರೂಪಿಸಿದರು, ಕಲಾಕ್ಷೇತ್ರ ಅಧ್ಯಕ್ಷ ಬಿ.ಕಿಶೋರ್‌ಕುಮಾರ್ ವಂದಿಸಿದರು, ದಿನಕರ್ ಆರ್ ಶೆಟ್ಟಿ ಫಲಾನುಭವಿಗಳ ಪಟ್ಟಿ ವಾಚಿಸಿದರು.
ಬಳಿಕ ಮಂಗಳೂರಿನ ಜರ್ನಿ ಥಿಯೇಟರ್ ತಂಡದ 'ಬೇಲಿ ಮುಳ್ಳಿನ ನೀಲಿ ಹೂವುಗಳು', ಗುರುಕುಲ ವಿದ್ಯಾರ್ಥಿಗಳಿಂದ 'ನೃತ್ಯ ಸಂಗಮ' ಹಾಗೂ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ತಂಡದವರಿಂದ 'ಕೊಲ್ಲೂರು ಶ್ರೀ ಮೂಕಾಂಬಿಕಾ ನೃತ್ಯಗಾಥೆ' ಪ್ರದರ್ಶನ ನಡೆಯಿತು. ಸುಮಾರು ಐದು ಸಾವಿರ ಜನರಿಗೆ ರಾತ್ರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.
Kshetra Samachara
26/12/2024 01:36 pm