ಮಂಗಳೂರು: ದ.ಕ. ಜಿಲ್ಲೆಯ ಸಂಸದ ಕ್ಯಾ.ಬ್ರಿಜೇಶ್ ಚೌಟ ಸಾರಥ್ಯದಲ್ಲಿ ನಡೆಯುವ 8ನೇ ವರ್ಷದ ‘ಮಂಗಳೂರು ಕಂಬಳ’ ನಗರದ ಬಂಗ್ರಕೂಳೂರಿನಲ್ಲಿರುವ ಗೋಲ್ಡ್‌ಫಿಂಚ್ ಸಿಟಿಯಲ್ಲಿ ಡಿ.28ರಂದು ನಡೆಯಲಿದೆ.
ಕಂಬಳ ಸಮಿತಿ ಅಧ್ಯಕ್ಷರೂ ಆಗಿರುವ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ರಾಮ-ಲಕ್ಷ್ಮಣ ಜೋಡುಕರೆಯಲ್ಲಿ ನಡೆಯುವ ಹೊನಲು ಬೆಳಕಿನ ಮಂಗಳೂರು ಕಂಬಳ ಡಿ.28ರಂದು ಬೆಳಗ್ಗೆ 8.30ಕ್ಕೆ ಎಂಆರ್‌ಪಿಎಲ್ ನಿವೃತ್ತ ಆಡಳಿತ ನಿರ್ದೇಶಕ ಎಂ.ವೆಂಕಟೇಶ್‌ರಿಂದ ಉದ್ಘಾಟನೆಗೊಳ್ಳಲಿದೆ. ಕಂಕನಾಡಿ ಶ್ರೀಬ್ರಹ್ಮಬೈದರ್ಕಳ ಗರಡಿ ಅಧ್ಯಕ್ಷ ಕೆ.ಚಿತ್ತರಂಜನ್ ದೀಪ ಪ್ರಜ್ವಲನ ಮಾಡುವರು. ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಅಧ್ಯಕ್ಷತೆ ವಹಿಸುವರು.
ವಿವಿಧ ಕ್ಷೇತ್ರಗಳ ಮಠಾಧೀಶರುಗಳು ಆಶೀರ್ವಚನ ನೀಡಲಿದ್ದಾರೆ. ಸಂಜೆ 6 ಗಂಟೆಗೆ ಕಂಬ ಳ ಸಮಿತಿ ಗೌರವಾಧ್ಯಕ್ಷ ಎಂ.ಆರ್.ಜಿ. ಗ್ರೂಪ್ ಸಿಎಂಡಿ ಡಾ.ಕೆ.ಪ್ರಕಾಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಸ್ಪೀಕರ್ ಯು.ಟಿ.ಖಾದರ್, ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಕಾರ್ಕಳ ಶಾಸಕ ಸುನಿಲ್ ಕುಮಾರ್, ಜಿಲ್ಲೆಯ ಶಾಸಕರು ಸೇರಿದಂತೆ ಚಲನಚಿತ್ರ ಕ್ಷೇತ್ರದ ಸಾಧಕರು, ಇತರೆ ಗಣ್ಯರು ಭಾಗವಹಿಸುವರು ಎಂದರು.
ಕನೆಹಲಗೆ, ಅಡ್ಡ ಹಲಗೆ, ಹಗ್ಗ ಕಿರಿಯ, ಹಗ್ಗ ಹಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ ವಿಭಾಗ ಸೇರಿದಂತೆ ಆರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ಚಿನ್ನದ ಪವನ್ ಬಹುಮಾನವಾಗಿ ನೀಡಲಾಗುವುದು. ಡಿ.29ರಂದು ಬೆಳಗ್ಗೆ ಕಂಬಳ ಸಮಾರೋಪ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಬಹುಮಾನ ವಿತರಣೆ ನಡೆಯಲಿದೆ ಎಂದರು.
ಕಂಬಳ ಸಮಿತಿಯ ಉಪಾಧ್ಯಕ್ಷ ಈಶ್ವರ ಪ್ರಸಾದ್ ಶೆಟ್ಟಿ ಮಾತನಾಡಿ, ಎಳೆಯರು ಹಾಗೂ ಯುವಕರನ್ನು ಕಂಬಳದ ಭಾಗವಾಗಿಸುವ ಉದ್ದೇಶದಿಂದ ‘ಕಲರ್ ಕೂಟ’ ಎಂಬ ಸ್ಪರ್ಧಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆರು ವರ್ಷ ಮೇಲ್ಪಟ್ಟ ಮಕ್ಕಳಿಂದ ತೊಡಗಿ ಎಲ್ಲರೂ ಮೂರು ವಿಭಾಗಗಳಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ.
ಭಾಗವಹಿಸಿದ ಎಲ್ಲರಿಗೂ ನೆನಪಿನ ಕಾಣಿಕೆ ಹಾಗೂ ಆಕರ್ಷಕ ಬಹುಮಾನ ನೀಡಲಾಗುತ್ತದೆ. ಕಂಬಳದ ತಮ್ಮ ಅನುಭವಗಳನ್ನು ಪುಟ್ಟ ಹಾಗೂ ಯುವ ಪ್ರತಿಭೆಗಳು ತಮ್ಮ ಕುಂಚದಿಂದ ಬಿಡಿಸಿ ಈ ಮಣ್ಣಿನ ಸಾಂಸ್ಕೃತಿಕ ಸಂಪತ್ತಿನ ರಾಯಭಾರಿಗಳಾಗಲಿ ಎಂಬುದು ನಮ್ಮ ಆಶಯ ಎಂದರು. ಅಲ್ಲದೆ, ಕಂಬಳದ ರೀಲ್ಸ್ ಮತ್ತು ಫೋಟೋಗ್ರಫಿ ಸ್ಪರ್ಧೆಯನ್ನು ಕೂಡ ಆಯೋಜಿಸಲಾಗಿದೆ. ಇದನ್ನು ಮಂಗಳೂರು ಕಂಬಳ ಸಮಿತಿಯ ಈಮೇಲ್‌ಗೆ ಕಳುಹಿಸಬೇಕು ಎಂದು ತಿಳಿಸಿದರು.
PublicNext
27/12/2024 07:43 am