ಸಾಗರ : ಕಾಲಮಿತಿಯೊಳಗೆ ಬಿ.ಎಚ್.ರಸ್ತೆ ಅಗಲೀಕರಣಕ್ಕೆ ಶಾಸಕರು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ನಗರಸಭೆಯಿಂದ ನೋಟಿಸ್ ನೀಡಲಾಗುತ್ತಿದೆ ಎಂದು ಪೌರಾಯುಕ್ತ ಎಚ್.ಕೆ.ನಾಗಪ್ಪ ತಿಳಿಸಿದರು.
ಇಲ್ಲಿನ ಬಿ.ಎಚ್.ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ 206 ಅಗಲೀಕರಣ ಹಿನ್ನೆಲೆಯಲ್ಲಿ ಬಿ.ಎಚ್.ರಸ್ತೆ ನಿವಾಸಿಗಳಿಗೆ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ನೋಟಿಸ್ ನೀಡಿ ಅವರು ಮಾತನಾಡುತ್ತಿದ್ದರು.
ಗಾಂಧಿನಗರ ವೃತ್ತದಿಂದ ಸಣ್ಣ,ಮನೆ ಸೇತುವೆವರೆಗೆ ೨೮೩ ಆಸ್ತಿ ಮಾಲೀಕರಿದ್ದು, ರಸ್ತೆ ಅಗಲೀಕರಣಕ್ಕಾಗಿ ಅವರ ಸ್ವತ್ತನ್ನು ಭೂಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಪರಿಹಾರ ನೀಡಲು 34 ಕೋಟಿ ರೂ. ಬಿಡುಗಡೆಯಾಗಿದೆ. ಮುಂದಿನ 30 ದಿನದೊಳಗೆ ರಸ್ತೆ ಅಗಲೀಕರಣಕ್ಕೆ ಜಾಗ ಬಿಟ್ಟುಕೊಡುವಂತೆ ನೋಟಿಸ್ ಮೂಲಕ ಸೂಚನೆ ನೀಡಲಾಗಿದೆ ಎಂದರು.
ಮುಂದಿನ 30 ದಿನದೊಳಗೆ ಬಿ.ಎಚ್.ರಸ್ತೆ ನಿವಾಸಿಗಳು ಅಗಲೀಕರಣಕ್ಕೆ ಪೂರಕವಾಗಿ ಸ್ಪಂದಿಸಬೇಕು. ಒಂದೊಮ್ಮೆ ನಾವು ನೀಡುವ ಪರಿಹಾರ ಕಡಿಮೆಯಾಗುತ್ತಿದೆ ಎಂದರೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಬಹುದು. ಜಿಲ್ಲಾಧಿಕಾರಿಗಳ ಬಳಿಯೂ ನ್ಯಾಯಸಮ್ಮತ ಪರಿಹಾರ ಸಿಗದೆ ಹೋದಲ್ಲಿ ನ್ಯಾಯಾಲಯಕ್ಕೆ ಹೋಗಲು ಸಹ ಅವಕಾಶ ಇರುತ್ತದೆ. ಈಗಾಗಲೆ ನಗರವ್ಯಾಪ್ತಿಯೊಳಗೆ ಹಾದು ಹೋಗುವ ಬಿ.ಎಚ್.ರಸ್ತೆಯನ್ನು ಅಗಲೀಕರಣ ಮಾಡಲು ಶಾಸಕರು ತೀವೃ ಉತ್ಸಾಹ ತೋರಿಸಿರುವ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿನಿಂದ ಕಾಮಗಾರಿ ಚುರುಕಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪರಿಸರ ಅಭಿಯಂತರ ಮದನ್, ನಗರಸಭೆ ಸದಸ್ಯ ಸೈಯದ್ ಜಾಕೀರ್, ನಗರಸಭೆ ಅಧಿಕಾರಿಗಳು ಹಾಜರಿದ್ದರು.
Kshetra Samachara
25/12/2024 08:15 pm