ಹೊಸದುರ್ಗ : ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿರುವ ಅಕ್ರಮ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ತಡೆಗಟ್ಟಬೇಕು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಕ್ರಮ ಮದ್ಯ ಮಾರಾಟ ನಿಯಂತ್ರಣ ಸಭೆಯಲ್ಲಿ ಮಾತನಾಡಿ, ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದ್ದು, ಸಾರ್ವಜನಿಕರಿಂದ ದೂರು ಬರುತ್ತಿವೆ. ಕುಡಿತದ ಚಟಕ್ಕೆ ಬಲಿಯಾದವರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಅಪಘಾತ, ಕುಡಿತದ ಸಾವು ಪ್ರಕರಣಗಳು ಹೆಚ್ಚುತ್ತಿವೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ಮಾರಾಟವನ್ನು ಹರಾಜು ಹಾಕಿರುವ ಕುರಿತು ಕೂಡ ದೂರುಗಳಿವೆ. ಇಂತಹ ಹಣದ ಅವಶ್ಯಕತೆಯಿಲ್ಲ. ಸರ್ಕಾರಕ್ಕೂ ಮದ್ಯದ ಆದಾಯ ಬೇಕಾಗಿಲ್ಲ. ತಾಲೂಕಿನ ಶಾಂತಿ ನೆಮ್ಮದಿ ಮುಖ್ಯವಾಗಿದೆ. ಬಡ ಕುಟುಂಬಗಳು ನೆಮ್ಮದಿಯಾಗಿ ಜೀವನ ನೆಡೆಸುವಂತಹ ವಾತಾವರಣ ಸೃಷ್ಟಿಸುವ ಹೊಣೆ ಎಲ್ಲರ ಮೇಲಿದೆ ಎಂದು ತಿಳಿಸಿದರು.
ಅಬಕಾರಿ ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸುವ ಮೂಲಕ ಅಕ್ರಮವನ್ನು ತಡೆಗಟ್ಟಬೇಕು. ಯಾವುದೇ ಮುಲಾಜಿಲ್ಲದೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ. ಅಂಗಡಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಿ. ಅಕ್ರಮ ಮಾರಾಟ ನಿಲ್ಲದಿದ್ದರೆ ಅಧಿಕಾರಿಗಳನ್ನು ಹೊಣೆಯಾಗಿಸಲಾಗುವುದು ಎಂದು ಎಚ್ಚರಿಸಿದರು.
ಪರವಾನಗಿ ಹೊಂದಿರುವ ಮದ್ಯದ ಅಂಗಡಿಗಳಲ್ಲಿ ನಿಯಮದಂತೆ ನಡೆಯುವ ವ್ಯಾಪಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ತಾಲೂಕಿನ ಹಿತದೃಷ್ಟಿಯ ವಿಚಾರಕ್ಕೆ ಮದ್ಯದ ಅಂಗಡಿಗಳ ಮಾಲೀಕರು ಸಹಕಾರ ನೀಡಬೇಕು ಎಂದರು.
ತಹಸೀಲ್ದಾರ್ ತಿರುಪತಿ ವಿ.ಪಾಟೀಲ್, ಪೋಲಿಸ್ ನಿರೀಕ್ಷಕ ತಿಮ್ಮಣ್ಣ, ಅಬಕಾರಿ ನಿರೀಕ್ಷಕ ಅವಿನಾಶ್ ಇತರರಿದ್ದರು.
ಸಭೆಯಲ್ಲಿ ಹಾಜರಿದ್ದ ಮದ್ಯದಂಗಡಿ ಮಾಲೀಕರು ಅಬಕಾರಿ ಇಲಾಖೆ ಅಂಗಡಿಗಳ ಮಾರಾಟಕ್ಕೆ ಪ್ರಮಾಣ ನಿಗದಿಪಡಿಸುತ್ತಿರುವುದು ಸಮಸ್ಯೆಯಾಗಿದೆ. ಅಬಕಾರಿ ಇಲಾಖೆ ಒತ್ತಡವಿಲ್ಲದಿದ್ದರೆ ಅಕ್ರಮ ಮಾರಾಟವನ್ನು ನಿಲ್ಲಿಸಬಹುದು ಎಂದು ಶಾಸಕರಿಗೆ ಮನವಿ ಮಾಡಿದರು.
ಕೂಡಲೇ ಅಬಕಾರಿ ಡಿಸಿಯನ್ನು ಪೋನ್ ಮೂಲಕ ಸಂಪರ್ಕಿಸಿದ ಶಾಸಕ ಬಿ.ಜಿ.ಗೋವಿಂದಪ್ಪ ಹೊಸದುರ್ಗ ತಾಲೂಕಿನಲ್ಲಿ ಹೆಚ್ಚಾಗಿರುವ ಅಕ್ರಮ ಮದ್ಯ ಮಾರಾಟವನ್ನು ತಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ತಾಲೂಕಿನ ಮದ್ಯದ ಅಂಗಡಿಗಳಿಗೆ ಹೆಚ್ಚಿನ ಮಾರಾಟ ಮಾಡಲು ಒತ್ತಡ ಹಾಕಬಾರದು. ಟಾರ್ಗೆಟ್ ಫಿಕ್ಸ್ ಮಾಡುವಂತಿಲ್ಲ. ಅಂಗಡಿಯಲ್ಲಿ ಎಷ್ಟು ವ್ಯಾಪಾರವಾಗುತ್ತದೋ ಅಷ್ಟೇ ಸಾಕು ಎಂದು ತಾಕೀತು ಮಾಡಿದರು..
Kshetra Samachara
25/12/2024 11:58 am